ನವದೆಹಲಿ: ಧಾರ್ಮಿಕ ಆಚರಣೆಯು ಅನುಯಾಯಿಗಳ ನಂಬಿಕೆಯ ವಿಚಾರ. ಹೀಗಾಗಿ ಈ ಬಗ್ಗೆ ನ್ಯಾಯಾಲಯಗಳು ನಿರ್ಧರಿಸಬಾರದು ಎಂದು ಅಖಿಲ ಭಾರತೀಯ ಸಂತ ಸಮಿತಿಯು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದೇ ವೇಳೆ ಶಬರಿಮಲೆ ಪರಿಶೀಲನಾ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಅದು ಮನವಿ ಮಾಡಿದೆ.
ಧಾರ್ಮಿಕ ವಿಚಾರಗಳಲ್ಲಿ 'ಪರಿಣತಿಯಿಂದ' ಕಾರ್ಯನಿರ್ವಹಿಸಲು ನ್ಯಾಯಾಲಯಗಳನ್ನು ಅಣಿಗೊಳಿಸಿಲ್ಲ. ಧಾರ್ಮಿಕ ಆಚರಣೆಯ ಹಕ್ಕನ್ನು ಹತ್ತಿಕ್ಕಲು ಸಮಾನತೆಯ ಹಕ್ಕನ್ನು ಬಳಕೆ ಮಾಡಬಾರದು ಎಂದು ಅದು ಪ್ರತಿಪಾದಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ನ್ಯಾಯಪೀಠವು, ಶಬರಿಮಲೆ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಲಿಂಗ ತಾರತಮ್ಯ ವಿಚಾರವಾಗಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್ 7ರಂದು ನಡೆಸಲಿದೆ.
2018ರ ಸೆಪ್ಟೆಂಬರ್‌ನಲ್ಲಿ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ 10ರಿಂದ 50 ವರ್ಷದ ಮಹಿಳೆಯರ ಪ್ರವೇಶದ ಮೇಲಿದ್ದ ನಿರ್ಬಂಧವನ್ನು ತೆಗೆದುಹಾಕಿತ್ತು. ಈ ಆಚರಣೆಯು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಹೇಳಿತ್ತು.

