ಇರಾನ್ ಮೇಲೆ ನೇರ ಸೈನಿಕ ಆಕ್ರಮಣ ಮುಂದುವರಿಸುವುದು ಅಥವಾ ಮಧ್ಯಪ್ರಾಚ್ಯ ವಲಯದಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವ ಆಯ್ಕೆಯನ್ನು ಸದ್ಯಕ್ಕೆ ಅಮಾನತಿನಲ್ಲಿಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆರ್ಥಿಕ ದಿಗ್ಬಂಧನವನ್ನು ಮುಂದುವರಿಸುವುದೇ ಅತ್ಯುತ್ತಮ ಆಯ್ಕೆ ಎಂದು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಗೆ ಸಂಬಂಧಿಸಿದ ಟ್ಯಾಂಕರ್ ಗಳ ಚಲನವಲನವನ್ನು ಅಮೆರಿಕ ಪರಿಣಾಮಕಾರಿಯಾಗಿ ನಿಯಂತ್ರಿಸಿರುವುದರಿಂದ ಕಚ್ಚಾ ತೈಲದ ರಫ್ತು ಮೊಟಕುಗೊಂಡಿದೆ. ಉತ್ಪಾದನೆ ಮುಂದುವರಿದಿದ್ದರೂ ರಫ್ತು ಸ್ಥಗಿತಗೊಂಡರೆ, ಕಚ್ಚಾ ತೈಲದ ದಾಸ್ತಾನಿಗೆ ಸ್ಥಳಾವಕಾಶ ಕೊರತೆಯಾಗುತ್ತದೆ ಮತ್ತು ಕ್ರಮೇಣ ತೈಲ ಉತ್ಪಾದನೆ ನಿಲ್ಲಿಸುವ ಪರಿಸ್ಥಿತಿ ಎದುರಾಗಬಹುದು. ಇದು ಇರಾನ್‌ನ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ವರದಿ ವಿಶ್ಲೇಷಿಸಿದೆ.

