ಕೋಲ್ಕತ್ತ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಮೂಲಕ ಮತಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಿ ಹಾಕಿರುವುದನ್ನು ವಿರೋಧಿಸಿ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ(ಏ.8) ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್‌ಐಆರ್ ವೇಳೆ 91 ಲಕ್ಷ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದೆ.
ಎಸ್‌ಐಆರ್ ಹೆಸರಿನಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗವು ಜಂಟಿಯಾಗಿ ಈ ಕೆಲಸ ಮಾಡಿದೆ. ಇದು ಮತದಾರರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಎಂದು ಆರೋಪಿಸಿದ್ದಾರೆ.
ಮತದಾರರ ಹೆಸರುಗಳನ್ನು ಅಳಿಸಿ ಹಾಕುವ ಮೂಲಕ ಅವರು ಚುನಾವಣೆಯಲ್ಲಿ ಟಿಎಂಸಿ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಿಲ್ಲ. ಇದರ ವಿರುದ್ಧ ನಾವು ಸಂವಿಧಾನಿಕವಾಗಿ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
ಎಸ್‌ಐಆರ್ ಹಾಗೂ ಮತದಾರರಿಗೆ ಹಣ ನೀಡುವ ಮೂಲಕ ಬಿಜೆಪಿ ದಾರಿ ತಪ್ಪಿಸುತ್ತಿದೆ. ಅವರಿಗೆ ಮತ ಹಾಕಿದರೆ ನೀವು ಮೀನು, ಮಾಂಸ ಮತ್ತು ಬಂಗಾಳಿ ಮಾತನಾಡುವುದನ್ನು ಕೂಡ ಬಿಡಬೇಕಾಗುತ್ತದೆ ಎಂದು ಚುನಾವಣಾ ರ‍್ಯಾಲಿಯೊಂದರಲ್ಲಿ ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ಎಸ್‌ಐಆರ್ ನಂತರ ಪಶ್ಚಿಮ ಬಂಗಾಳದಲ್ಲಿ 90.83 ಲಕ್ಷ ಹೆಸರುಗಳನ್ನು ಮತಪಟ್ಟಿಯಿಂದ ಅಳಿಸಿ ಹಾಕಿದೆ. 2025ರ ಅಂಕಿ ಅಂಶಗಳ ಪ್ರಕಾರ ಅಲ್ಲಿ ಒಟ್ಟು 7.66 ಕೋಟಿ ಮತದಾರರಿದ್ದಾರೆ. ಅದರಲ್ಲಿ ಶೇ 11.85 ಹೆಸರುಗಳನ್ನು ತೆಗೆದುಹಾಕಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್‌ಐಆರ್ ವಿರೋಧಿಸಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಪ್ರತಿಭಟನೆ ನಡೆಸಿತ್ತು. ಎಸ್‌ಐಆರ್ ಪ್ರಕಿಯೆಯಲ್ಲಿ ಹಸ್ತಕ್ಷೇಪ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಕೂಡ ಮಾಡಿದ್ದರು.

