ಕಾಸರಗೋಡು: ಕುಂಬಳೆ ಸೀಮೆಯ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಶ್ರೀ ದೇವರ ಅವಭೃತ ಸ್ನಾನ, ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತು.
ಭಾನುವಾರ ಕವಾಟೋದ್ಘಾಟನೆ, ಮಧ್ಯಾಹ್ನ ತುಲಾಭಾರ ಸೇವೆ, ಸಂಜೆ ತಾಯಂಬಕ, ವೀಣಾರಾಧನೆ, ರಾತ್ರಿ ಶ್ರೀದೇವರ ಬಲಿ ಉತ್ಸವ ನಡೆಯಿತು. ನಂತರ ವಿಶೇಷ ವಿದ್ಯುತ್ ದೀಪಾಲಂಕೃತಗೊಂಡ ದೇವಾಲಯ ವಠಾರದ ಆರಾಟು ಕೆರೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಶನಿವಾರ ಮಧೂರು ಬೆಡಿ ಅಂಗವಾಗಿ ಶ್ರೀ ಮಧೂರು ಕ್ಷೇತ್ರದ ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಭವ್ಯ ಘೋಷಯಾತ್ರೆ ನಡೆಯಿತು. ನಂತರ ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, ಮಧೂರು ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಿಕ ಸುಡುಮದ್ದು ಪ್ರದರ್ಶನ, ಶಯನ, ಕವಾಟ ಬಂಧನ ನಡೆಯಿತು.



