ಬೈರುತ್: ದಕ್ಷಿಣ ಲೆಬನಾನ್‌ನಲ್ಲಿ ಯೇಸುಕ್ರಿಸ್ತರ ಪ್ರತಿಮೆಯನ್ನು ಇಸ್ರೇಲ್ ಸೈನಿಕನೋರ್ವ ಧ್ವಂಸಗೊಳಿಸುತ್ತಿರುವ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಾಗತಿಕವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಫೋಟೊವನ್ನು ಮೊದಲು ಫೆಲೆಸ್ತೀನ್‌ನ ವರದಿಗಾರ ಯೂನಿಸ್ ತಿರವಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಫೋಟೊವನ್ನು ಕ್ರಿಶ್ಚಿಯನ್ ಪಟ್ಟಣವಾದ ಡೆಬೆಲ್‌ನಲ್ಲಿ ತೆಗೆಯಲಾಗಿದೆ. ಇಸ್ರೇಲ್ ಸೈನಿಕನೊಬ್ಬ ಯೇಸುಕ್ರಿಸ್ತರ ಪ್ರತಿಮೆಯನ್ನು ಹಾನಿಗೊಳಿಸುತ್ತಿದ್ದಾನೆ ಎಂದು ತಿರವಿ ಹೇಳಿದ್ದಾರೆ.
ಪ್ರತಿಮೆ ಧ್ವಂಸಗೊಳ್ಳುವ ಮೊದಲು ತೆಗೆದಿದ್ದ ಹಳೆಯ ಚಿತ್ರವನ್ನೂ ಕೂಡ ಯೂನಿಸ್ ತಿರವಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ "ತಂದೆಯೇ, ಇವರೆನ್ನು ಕ್ಷಮಿಸು; ಇವರು ಏನು ಮಾಡುತ್ತಿದ್ದಾರೆ ಎಂದು ಅವರಿಗೆ ಗೊತ್ತಿಲ್ಲ" ಎಂಬ ಬೈಬಲ್‌ನ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಇದನ್ನು ಅವಮಾನಕಾರಿ ಮತ್ತು ಪ್ರಚೋದನಾಕಾರಿ ಕ್ರಮವೆಂದು ಟೀಕಿಸಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಗಳು (IDF) ಆರಂಭದಲ್ಲಿ ಪೋಟೊ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿತ್ತು. ಆದರೆ ಆ ಬಳಿಕ ಪೋಟೊದಲ್ಲಿ ಕಾಣಿಸಿಕೊಂಡಿರುವುದು ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಐಡಿಎಫ್ ಸೈನಿಕ ಎಂದು ಒಪ್ಪಿಕೊಂಡಿದೆ. ಸೈನಿಕನ ನಡೆ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

