ನವದೆಹಲಿ: ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಜರುಗುತ್ತಿದ್ದು, ಪುದುಚೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮತದಾನದ ಪ್ರಮಾಣ ಅತಿಹೆಚ್ಚು ಇದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಪುದುಚೇರಿಯಲ್ಲಿ ಒಟ್ಟು 139 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದು, ಏ.9ರಂದು ನಡೆದ ಮತದಾನದಲ್ಲಿ ಶೇ 91.81 ಜನರು ಮತ ಹಾಕಿದ್ದಾರೆ.
ಏ.23ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 7,728 ಲಿಂಗತ್ವ ಅಲ್ಪಸಂಖ್ಯಾತ ಮತದಾರರಲ್ಲಿ, ಶೇ 60.49 ಮತದಾನ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಏ.23ರಂದು ನಡೆದ ಮೊದಲ ಹಂತದ ಮತದಾನದಲ್ಲಿ 465 ಲಿಂಗತ್ವ ಅಲ್ಪಸಂಖ್ಯಾತ ಮತದಾರರಲ್ಲಿ ಶೇ 56.79ರಷ್ಟು ಮತಚಲಾಯಿಸಿದ್ದಾರೆ. ಕೇರಳದಲ್ಲಿ 277 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದು, ಶೇ 57.04 ಮತದಾನವಾಗಿದೆ.
ಅಸ್ಸಾಂನಲ್ಲಿ 343 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದು, ಶೇ 36.84ರಷ್ಟು ಮತದಾನವಾಗಿದೆ. ಇದು ಪಂಚರಾಜ್ಯ ಚುನಾವಣೆಯಲ್ಲಿನ ಅತಿಕಡಿಮೆ ಲಿಂಗತ್ವ ಅಲ್ಪಸಂಖ್ಯಾತ ಮತದಾನವಾಗಿದೆ.
ಮೇ 4ರಂದು ಪಂಚರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ಮಾಜಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ನವೀನ್ ಚಾವ್ಲಾ ಅವರು ಲಿಂಗತ್ವ ಅಲ್ಪಸಂಖ್ಯಾತ ಮತದಾನದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಮತದಾರರ ಪಟ್ಟಿಯಲ್ಲಿ ಅವರನ್ನು 'ಇತರೆ' ಲಿಂಗದ ಅಡಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಮನವೊಲಿಸಿದ್ದರು. ಇದೀಗ ಚುನಾವಣಾ ಆಯೋಗವು ಮತದಾರರನ್ನು ಪುರುಷ, ಮಹಿಳೆ ಮತ್ತು ಇತರೆ ಅಥವಾ ಲಿಂಗತ್ವ ಅಲ್ಪಸಂಖ್ಯಾತ ಎಂದು ಗುರುತಿಸುತ್ತಿದೆ.

