ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿರ್ಣಾಯಕ ಅಂತ್ಯಕ್ಕೆ ತಲುಪುವವರೆಗೆ ಮುಂದುವರಿಸಬೇಕೆಂದು ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನೇತೃತ್ವದ ಅಮೆರಿಕದ ಗಲ್ಫ್ ಮಿತ್ರರಾಷ್ಟ್ರಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಖಾಸಗಿಯಾಗಿ ಒತ್ತಾಯಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು Associated Press ವರದಿ ಮಾಡಿದೆ.
ಅಮೆರಿಕ, ಗಲ್ಫ್ ಮತ್ತು ಇಸ್ರೇಲಿ ಅಧಿಕಾರಿಗಳ ಪ್ರಕಾರ, ತಿಂಗಳ ಕಾಲ ನಡೆದ ಅಮೆರಿಕ ನೇತೃತ್ವದ ಬಾಂಬ್ ದಾಳಿಗಳಿಂದ ಟೆಹ್ರಾನ್ ಆಡಳಿತ ಸಾಕಷ್ಟು ದುರ್ಬಲಗೊಂಡಿಲ್ಲ ಎಂಬ ಅಭಿಪ್ರಾಯ ಗಲ್ಫ್ ರಾಷ್ಟ್ರಗಳಲ್ಲಿ ಮೂಡಿದೆ. ಆರಂಭದಲ್ಲಿ ಯುಎಸ್-ಇಸ್ರೇಲ್ ದಾಳಿಯ ಬಗ್ಗೆ ಪೂರ್ವ ಸೂಚನೆ ನೀಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಈ ರಾಷ್ಟ್ರಗಳು, ಈಗಿನ ಪರಿಸ್ಥಿತಿಯನ್ನು ಇರಾನ್ ನ ಧಾರ್ಮಿಕ ಗುರುಗಳ ಆಡಳಿತವನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲು "ಐತಿಹಾಸಿಕ ಅವಕಾಶ"ವೆಂದು ಪರಿಗಣಿಸುತ್ತಿವೆ ಎನ್ನಲಾಗಿದೆ.
ಸೌದಿ ಅರೇಬಿಯ, ಯುಎಇ, ಕುವೈತ್ ಹಾಗೂ ಬಹರೈನ್ ಅಧಿಕಾರಿಗಳು ಖಾಸಗಿ ಮಾತುಕತೆಯಲ್ಲಿ, ಇರಾನ್ ನಾಯಕತ್ವದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗುವವರೆಗೆ ಅಥವಾ ಅದರ ನಡವಳಿಕೆಯಲ್ಲಿ ಪರಿವರ್ತನೆ ಕಾಣುವವರೆಗೆ ಮಿಲಿಟರಿ ಕಾರ್ಯಾಚರಣೆ ನಿಲ್ಲಬಾರದು ಎಂದು ತಿಳಿಸಿದ್ದಾರೆ.
ಇದೀಗ ಟ್ರಂಪ್, ಇರಾನ್ ಒಪ್ಪಂದಕ್ಕೆ ಸಿದ್ಧವಿದೆ ಎಂದು ಹೇಳಿಕೊಳ್ಳುತ್ತಲೇ, ಶೀಘ್ರದಲ್ಲೇ ಒಪ್ಪಂದವಾಗದಿದ್ದರೆ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಧ್ಯಪ್ರಾಚ್ಯದಾದ್ಯಂತ 3,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಈ ಯುದ್ಧಕ್ಕೆ ದೇಶೀಯ ಬೆಂಬಲ ಒಗ್ಗೂಡಿಸಲು ಅವರು ಸಂಕಷ್ಟ ಅನುಭವಿಸುತ್ತಿದ್ದರೂ, ಪ್ರಮುಖ ಗಲ್ಫ್ ಮಿತ್ರರಾಷ್ಟ್ರಗಳ ಸಂಪೂರ್ಣ ಬೆಂಬಲ ತನ್ನೊಂದಿಗಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಫ್ಲೋರಿಡಾದಿಂದ ವಾಷಿಂಗ್ಟನ್ ಗೆ ಪ್ರಯಾಣಿಸುವ ವೇಳೆ, "ಸೌದಿ ಅರೇಬಿಯ ತೀವ್ರವಾಗಿ ಹೋರಾಡುತ್ತಿದೆ. ಖತರ್, ಯುಎಇ, ಕುವೈತ್, ಬಹರೈನ್ ಪ್ರತಿದಾಳಿ ನಡೆಸುತ್ತಿವೆ" ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಈ ರಾಷ್ಟ್ರಗಳು ಅಮೆರಿಕದ ಪಡೆಗಳು ಹಾಗೂ ನೆಲೆಗಳಿಗೆ ಆತಿಥ್ಯ ನೀಡುತ್ತಿದ್ದರೂ, ನೇರ ಆಕ್ರಮಣಕಾರಿ ದಾಳಿಗಳಲ್ಲಿ ಭಾಗವಹಿಸಿಲ್ಲ.
ಪ್ರಾದೇಶಿಕವಾಗಿ ಬೆಂಬಲ ಇದ್ದರೂ, ಗಲ್ಫ್ ರಾಷ್ಟ್ರಗಳಲ್ಲೇ ಕೆಲವು ಭಿನ್ನಾಭಿಪ್ರಾಯಗಳು ಕಂಡುಬರುತ್ತಿವೆ. ಸೌದಿ ಅರೇಬಿಯ ಹಾಗೂ ಯುಎಇ ದೇಶಗಳು, ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಒತ್ತಡ ಹೆಚ್ಚಿಸಲು ಮುಂಚೂಣಿಯಲ್ಲಿವೆ. ವಿಶೇಷವಾಗಿ ಯುಎಇ, ಸೈನಿಕ ಆಕ್ರಮಣಕ್ಕೂ ಆದೇಶಿಸಲು ಟ್ರಂಪ್ ಮೇಲೆ ಒತ್ತಡ ಹಾಕುತ್ತಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಕುವೈತ್ ಮತ್ತು ಬಹರೈನ್ ಕೂಡ ಈ ನಿಲುವಿಗೆ ಬೆಂಬಲ ವ್ಯಕ್ತಪಡಿಸಿವೆ.
ಇತ್ತ, ಒಮಾನ್ ಮತ್ತು ಖತರ್ ರಾಜತಾಂತ್ರಿಕ ಪರಿಹಾರವನ್ನು ಬೆಂಬಲಿಸುತ್ತಿದ್ದು, ಯುದ್ಧವನ್ನು ತಕ್ಷಣ ಕೊನೆಗೊಳಿಸುವುದು "ಉತ್ತಮ ಒಪ್ಪಂದ" ತರದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಯುದ್ಧದ ಅಂತಿಮ ಗುರಿಗಳ ಕುರಿತು ಸೌದಿ ಅರೇಬಿಯ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. ಇರಾನ್ ನ ಪರಮಾಣು ಕಾರ್ಯಕ್ರಮವನ್ನು ತಟಸ್ಥಗೊಳಿಸುವುದು, ಬ್ಯಾಲಿಸ್ಟಿಕ್ ಕ್ಷಿಪಣಿ ಸಾಮರ್ಥ್ಯವನ್ನು ನಾಶಪಡಿಸುವುದು ಹಾಗೂ ಸಶಸ್ತ್ರ ಗುಂಪುಗಳಿಗೆ ನೀಡುತ್ತಿರುವ ಬೆಂಬಲವನ್ನು ಕೊನೆಗೊಳಿಸುವುದು ಅವುಗಳ ಪ್ರಮುಖ ಬೇಡಿಕೆಗಳಾಗಿವೆ. ಜೊತೆಗೆ, ಹಾರ್ಮುಝ್ ಜಲಸಂಧಿಯನ್ನು ಭವಿಷ್ಯದಲ್ಲಿ ಅಡ್ಡಿಪಡಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಒತ್ತಾಯಿಸಲಾಗಿದೆ. ಯುದ್ಧಕ್ಕೂ ಮೊದಲು ಜಾಗತಿಕ ತೈಲದ ಸುಮಾರು 20% ಈ ಜಲಮಾರ್ಗದ ಮೂಲಕ ಸಾಗುತ್ತಿತ್ತು.
ಈ ಗುರಿಗಳನ್ನು ಸಾಧಿಸಲು 1979ರ ಇಸ್ಲಾಮಿಕ್ ಕ್ರಾಂತಿಯ ಬಳಿಕ ಸ್ಥಾಪಿತವಾದ ಧಾರ್ಮಿಕ ನಾಯಕರು ನಡೆಸುವ ಆಡಳಿತ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆ ಅಗತ್ಯವಿದೆ ಎಂದು ಸೌದಿ ನಾಯಕತ್ವ ಅಭಿಪ್ರಾಯಪಟ್ಟಿದೆ.
ಯುಎಇ ಅಧಿಕಾರಿಗಳು ಇರಾನ್ ವಿರುದ್ಧ ಕಠಿಣ ವಾಗ್ದಾಳಿ ನಡೆಸಿದ್ದಾರೆ. "ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಮನೆಗಳನ್ನು ಗುರಿಯಾಗಿಸುವ ಮತ್ತು ಇರಾನ್ ತನ್ನ ನಿಯಂತ್ರಣದಲ್ಲಿರುವ ಸಮುದ್ರ ಮಾರ್ಗಗಳು ಮತ್ತು ತೈಲ ಸಾಗಣೆ ದಾರಿಗಳನ್ನು ಬಳಸಿ ಜಾಗತಿಕ ವ್ಯಾಪಾರಕ್ಕೆ ಅಡ್ಡಿಪಡಿಸುವ ಮೂಲಕ ರಾಜಕೀಯ ಮತ್ತು ಸೈನಿಕ ಒತ್ತಡ ಹೇರುತ್ತಿದೆ. ಇರಾನ್ ತನ್ನ ಈ ರೀತಿಯ ಕ್ರಮಗಳನ್ನು ನಿಲ್ಲಿಸಬೇಕು ಮತ್ತು ಜಾಗತಿಕ ವ್ಯಾಪಾರ ಹಾಗೂ ಪ್ರಾದೇಶಿಕ ಶಾಂತಿಗೆ ಧಕ್ಕೆ ತರುವ ನೀತಿಗಳನ್ನು ಬದಲಿಸಬೇಕು" ಎಂದು ಯುಎಇ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವೆ ನೌರಾ ಅಲ್ ಕಾಬಿ ಹೇಳಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಇರಾನ್ ಗೆ ಪರಮಾಣು ಶಸ್ತ್ರಾಸ್ತ್ರ ದೊರೆಯದಂತೆ ತಡೆಯುವುದು ಅನಿವಾರ್ಯ ಎಂದು, ಗಲ್ಫ್ ಮಿತ್ರರಾಷ್ಟ್ರಗಳೆಲ್ಲ ಅಮೆರಿಕದ ಕ್ರಮಕ್ಕೆ ಬೆಂಬಲ ನೀಡುತ್ತಿವೆ ಎಂದು ತಿಳಿಸಿದ್ದಾರೆ.
ಇತ್ತ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುವುದಿಲ್ಲ, ಅಮೆರಿಕದ ಪಡೆಗಳನ್ನೇ ಗುರಿಯಾಗಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. "ಸೌದಿ ಅರೇಬಿಯಾ ಸಹೋದರ ರಾಷ್ಟ್ರ" ಎಂದೂ ಅವರು ಹೇಳಿದ್ದಾರೆ.
ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಇರಾನ್ ನ ಮಿಲಿಟರಿ ಸಾಮರ್ಥ್ಯ ಹಾಗೂ ಧಾರ್ಮಿಕ ಆಡಳಿತವನ್ನು ಮತ್ತಷ್ಟು ದುರ್ಬಲಗೊಳಿಸುವುದು ದೀರ್ಘಕಾಲಿಕ ಹಿತಾಸಕ್ತಿಗೆ ಅಗತ್ಯ ಎಂದು ಅಮೆರಿಕಕ್ಕೆ ತಿಳಿಸಿದ್ದಾರೆ. ಆದರೆ ಸಂಘರ್ಷ ದೀರ್ಘಕಾಲ ಮುಂದುವರಿದರೆ, ಇರಾನ್ ಸೌದಿ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಅಪಾಯ ಹೆಚ್ಚುತ್ತದೆ ಎಂಬ ಆತಂಕವೂ ಇದೆ.
ಸೌದಿ ಅಧಿಕಾರಿಗಳ ಪ್ರಕಾರ, ಅಂತಿಮವಾಗಿ ರಾಜಕೀಯ ಪರಿಹಾರವೇ ಗುರಿಯಾಗಿದ್ದರೂ, ತಕ್ಷಣದ ಆದ್ಯತೆ ದೇಶದ ಜನರು ಹಾಗೂ ಪ್ರಮುಖ ಮೂಲಸೌಕರ್ಯಗಳ ರಕ್ಷಣೆಯಾಗಿದೆ.
ಗಲ್ಫ್ ರಾಷ್ಟ್ರಗಳು ನೇರ ಯುದ್ಧದಲ್ಲಿ ಸೇರುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೆಚ್ಚುವರಿ ಸೈನಿಕ ಹಸ್ತಕ್ಷೇಪವು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ. ಸಂಘರ್ಷದ ಆರಂಭಿಕ ದಿನಗಳಲ್ಲಿ ನಡೆದ ತಪ್ಪು ದಾಳಿಗಳು ಮತ್ತು ಅಪಘಾತಗಳು ಇದಕ್ಕೆ ಉದಾಹರಣೆಯಾಗಿವೆ.
ಕುವೈತ್ ನಿಂದ ಮಿತ್ರ ಪಡೆಗಳ ಮೇಲೆ ತಪ್ಪಾಗಿ ನಡೆದ ಸೈನಿಕ ದಾಳಿಯಿಂದ ಮೂರು ಅಮೆರಿಕನ್ ಫೈಟರ್ ಜೆಟ್ ಗಳು ಉರುಳಿಬಿದ್ದ ಘಟನೆ ಮತ್ತು ಪಶ್ಚಿಮ ಇರಾಕ್ ನಲ್ಲಿ KC-135 ವಿಮಾನ ಅಪಘಾತದಲ್ಲಿ ಆರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ ಘಟನೆಗಳು ನಡೆದಿದ್ದವು.
ಇದೇ ವೇಳೆ, ಎಪ್ರಿಲ್ 6ರೊಳಗೆ ಇರಾನ್ ಹಾರ್ಮುಝ್ ಜಲಸಂಧಿಯನ್ನು ತೆರೆಯದಿದ್ದರೆ ಅದರ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ತನ್ನ ನೆರೆಹೊರೆಯ ರಾಷ್ಟ್ರಗಳ ನೀರು ಮತ್ತು ಇಂಧನ ಮೂಲಸೌಕರ್ಯಗಳನ್ನೇ ಗುರಿಯಾಗಿಸುವುದಾಗಿ ಇರಾನ್ ಎಚ್ಚರಿಸಿದೆ.

