ಕೊಲಂಬೊ (PTI): ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಆಮದು ಮಾಡಿಕೊಂಡಿರುವ ಕುರಿತು ತನಿಖೆ ನಡೆಸುವುದಾಗಿ ರಾಷ್ಟ್ರಾಧ್ಯಕ್ಷರ ಉನ್ನತಾಧಿಕಾರ ಆಯೋಗವೊಂದು ಘೋಷಿಸಿದ ಬೆನ್ನಲ್ಲೆ ಶ್ರೀಲಂಕಾದ ಇಂಧನ ಸಚಿವ ಕುಮಾರ ಜಯಾಕೊಡಿ ಅವರು ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟಗಳ ಬಳಿಕ ರಚನೆಗೊಂಡಿದ್ದ ನ್ಯಾಷನಲ್ ಪೀಪಲ್ಸ್ ಸರ್ಕಾರದ ಸಚಿವರೇ ಅಕ್ರಮ ಆರೋಪದಡಿ ರಾಜೀನಾಮೆ ನೀಡಿರುವುದು ಮಹತ್ವದ ವಿಚಾರವಾಗಿದೆ. ಅವರು ಕಳೆದ ವಾರವಷ್ಟೆ ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಕಂಡಿದ್ದರು.
ಜಯಾಕೊಡಿ ಜೊತೆ ಸಚಿವಾಲಯದ ಕಾರ್ಯದರ್ಶಿ ಉದಯಾಂಗ ಹೇಮಾಪಾಲ ಅವರೂ ರಾಜೀನಾಮೆ ನೀಡಿದ್ದಾರೆ ಎಂದು ಅಧ್ಯಕ್ಷ ಅನುರಾಕುಮಾರ ದಿಸ್ಸನಾಯಕೆ ಅವರ ಕಚೇರಿ ತಿಳಿಸಿದೆ. 'ಕಲ್ಲಿದ್ದಲು ಆಮದು ಪ್ರಕರಣದ ಕುರಿತು ಆಯೋಗದ ತನಿಖೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಅಧ್ಯಕ್ಷರ ಮಾಧ್ಯಮ ವಿಭಾಗ ತಿಳಿಸಿದೆ.

