ವಾಷಿಂಗ್ಟನ್: ಇಸ್ರೇಲ್ ಇನ್ನು ಮುಂದೆ ಲೆಬನಾನ್ ಮೇಲೆ ಬಾಂಬ್ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಿತ್ರರಾಷ್ಟ್ರ ಇಸ್ರೇಲ್ ವಿರುದ್ಧ ಕಠಿಣ ಧಾಟಿಯಲ್ಲಿ ಮಾತನಾಡಿರುವ ಟ್ರಂಪ್, 'ಇನ್ನು ಇದನ್ನೆಲ್ಲಾ ಸಹಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
'ಇನ್ನು ಮುಂದೆ ಇಸ್ರೇಲ್ ಲೆಬನಾನ್ ಮೇಲೆ ಬಾಂಬ್ ದಾಳಿ ನಡೆಸುವುದಿಲ್ಲ. ಹಾಗೆ ಮಾಡದಂತೆ ಅಮೆರಿಕ ಅವರನ್ನು ಪ್ರತಿಬಂಧಿಸಿದೆ' ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಟ್ರುತ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಮುಂದುವರಿದು, 'ಇರಾನ್ ಜೊತೆಗಿನ ನಮ್ಮ ಒಪ್ಪಂದಕ್ಕೂ, ಲೆಬನಾನ್ ಸಂಘರ್ಷಕ್ಕೂ ಸಂಬಂಧವಿಲ್ಲ' ಎಂದು ಒತ್ತಿ ಹೇಳಿದ್ದಾರೆ.
ಟ್ರಂಪ್ ಅವರ ಹೇಳಿಕೆಗಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ತಕ್ಷಣವೇ ಪ್ರತಿಕ್ರಿಯಿಸಲಿಲ್ಲ. ಆದರೆ, ನೆತನ್ಯಾಹು ಅವರು ಈ ಹಿಂದೆ ನೀಡಿದ್ದ ಹೇಳಿಕೆಯಲ್ಲಿ, ರಾಕೆಟ್ ದಾಳಿಯ ಭೀತಿಯಿಂದ ರಕ್ಷಿಸಿಕೊಳ್ಳಲು ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್‌ನಲ್ಲಿ ಬೀಡುಬಿಟ್ಟಿವೆ ಎಂದು ತಿಳಿಸಿದ್ದರು.
ಇಸ್ರೇಲ್ ಮತ್ತು ಲೆಬನಾನ್ ನಡುವಿನ 10 ದಿನಗಳ ಕದನ ವಿರಾಮವು ಗುರುವಾರದಿಂದಲೇ ಜಾರಿಗೆ ಬಂದಿದ್ದು, ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ನೀಡಿದೆ.
2 ಸಾವಿರ ಜನರ ಸಾವು:
ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಮಾರ್ಚ್ 2ರಂದು ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ ಉತ್ತರ ಇಸ್ರೇಲ್ ಮೇಲೆ ಗುಂಡಿನ ದಾಳಿ ನಡೆಸಿತ್ತು. ಇಲ್ಲಿಂದ ಪ್ರಾರಂಭವಾದ ಸಂಘರ್ಷ ನಂತರದ ದಿನಗಳಲ್ಲಿ ತಾರಕ್ಕೇರಿತ್ತು. ಲೆಬನಾನ್ ಮೇಲೆ ಇಸ್ರೇಲ್ ದಾಳಿಯಲ್ಲಿ ಸುಮಾರು 2 ಸಾವಿರ ಜನರು ಮೃತಪಟ್ಟಿದ್ದರು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದರು.

