ಜೆರುಸಲೇಂ: ಕಳೆದ ವಾರದಲ್ಲಿ 100ಕ್ಕೂ ಹೆಚ್ಚು ಹಿಜ್ಬುಲ್ಲಾ ಹೋರಾಟಗಾರರನ್ನು ಹತ್ಯೆಗೈದ ಬಳಿಕ ತನ್ನ ಪಡೆಗಳು ದಕ್ಷಿಣ ಲೆಬನಾನ್‍ನ ಪ್ರಮುಖ ಪಟ್ಟಣವನ್ನು ಸುತ್ತುವರಿದಿವೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
98ನೆ ಬೆಟಾಲಿಯನ್‍ನ ಪಡೆಗಳು ಆಯಕಟ್ಟಿನ ನಗರ ಬಿಂಟ್ ಜಬೆಲಿಯನ್ನು ಸುತ್ತುವರಿದಿದ್ದು ಅದರ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.
ಈ ನಗರದ ಸುತ್ತಮುತ್ತ ಕಳೆದ ಒಂದು ವಾರದಿಂದ ನಡೆದ ಸಂಘರ್ಷದಲ್ಲಿ ಇಸ್ರೇಲಿ ಪಡೆಗಳು 100ಕ್ಕೂ ಹೆಚ್ಚು ಹಿಜ್ಬುಲ್ಲಾ ಹೋರಾಟಗಾರರನ್ನು ಹತ್ಯೆಗೈದಿವೆ' ಎಂದು ಇಸ್ರೇಲಿ ಮಿಲಿಟರಿ ವಕ್ತಾರರು ಹೇಳಿದ್ದಾರೆ.
ನಗರದ ಪ್ರವೇಶ ದ್ವಾರದಲ್ಲಿ ಇಸ್ರೇಲಿ ಪಡೆಗಳಿಂದ ತೀವ್ರ ಫಿರಂಗಿ ದಾಳಿ ಮುಂದುವರಿದಿರುವುದಾಗಿ ಲೆಬನಾನ್‍ನ ಸರ್ಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ. ಈ ಮಧ್ಯೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು `ಹಿಜ್ಬುಲ್ಲಾದ ಬೆದರಿಕೆಯನ್ನು ಇಸ್ರೇಲಿ ಪಡೆಗಳು ನಿವಾರಿಸಿವೆ. ಆದರೆ ಇನ್ನೂ ಬಹಳ ಕೆಲಸವನ್ನು ಮಾಡಬೇಕಿದೆ ಮತ್ತು ನಾವದನ್ನು ಮಾಡುತ್ತಿದ್ದೇವೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

