ರಾಯ್ಪರ: ಮನೆಯಲ್ಲಿ ಪ್ರಾರ್ಥನಾ ಸಭೆ ನಡೆಸುವುದನ್ನು ಯಾವ ಕಾನೂನೂ ನಿಷೇಧಿಸುವುದಿಲ್ಲ ಎಂದು ಛತ್ತೀಸ್ ಗಢ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಮನೆಗಳಲ್ಲಿ ಕ್ರಿಶ್ಚಿಯನ್ ಪ್ರಾರ್ಥನೆ ಆಯೋಜಿಸುವುದರಿಂದ ದೂರ ಉಳಿಯಬೇಕು ಎಂದು ಜಾಂಗೀರ್ ಚಂಪಾ ನಿವಾಸಿಗಳಿಗೆ ಪೊಲೀಸರು ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನರೇಶ್ ಕುಮಾರ್ ಚಂದ್ರವಂಶಿ, "ಯಾವುದೇ ವ್ಯಕ್ತಿ ತಾನು ವಾಸಿಸುವ ಮನೆಯಲ್ಲಿ ಪ್ರಾರ್ಥನೆ / ಪ್ರಾರ್ಥನಾ ಸಭೆಗಳನ್ನು ನಡೆಸುವುದನ್ನು ನಿರ್ಬಂಧಿಸುವ ಯಾವುದೇ ಕಾನೂನು ಇಲ್ಲ.
ಮುಂದುವರಿದು, ಕಾನೂನನ್ನು ಉಲ್ಲಂಘಿಸದೆ ಆಯೋಜಿಸಲಾಗುವ ಪ್ರಾರ್ಥನೆ ಅಥವಾ ಪ್ರಾರ್ಥನಾ ಸಭೆಗಳನ್ನು ನಡೆಸಲು ಯಾವುದೇ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯಬೇಕಾದ ಅಗತ್ಯವೂ ಇಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಒಂದು ವೇಳೆ ಅಲ್ಲೇನಾದರೂ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸಿದರೆ, ಪ್ರಾಧಿಕಾರಗಳು ಸೂಕ್ತ ಕಾನೂನುಗಳಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದೂ ನ್ಯಾಯಾಲಯ ಹೇಳಿದೆ.
ಹೀಗಾಗಿ, ಅರ್ಜಿದಾರರ ನಾಗರಿಕ ಹಕ್ಕುಗಳ ಮಧ್ಯೆ ಪ್ರವೇಶಿಸಬಾರದು ಹಾಗೂ ಅವರಿಗೆ ವಿಚಾರಣೆಯ ಸೋಗಿನಲ್ಲಿ ಕಿರುಕುಳ ನೀಡಬಾರದು ಎಂದು ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

