LIC ನೀಡಿದ ದೂರಿನ ಮೇರೆಗೆ ಸಂಚು, ವಂಚನೆ ಹಾಗೂ ದುರುಪಯೋಗದ ಆರೋಪಗಳು ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಲಾಗಿದೆ. ರಿಲಾಯನ್ಸ್ ಕಮ್ಯೂನಿಕೇಶನ್ಸ್ ಹಾಗೂ ಅನಿಲ್ ಅಂಬಾನಿ ವಿರುದ್ಧ ದಾಖಲಾಗಿರುವ ನಾಲ್ಕನೇ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಿಲಾಯನ್ಸ್ ಕಮ್ಯೂನಿಕೇಶನ್ಸ್ ಲಿಮಿಟೆಡ್ ಕಂಪೆನಿ ಹಾಗೂ ಅದರ ಆಡಳಿತ ವರ್ಗವು ಸಂಸ್ಥೆಯ ಆರ್ಥಿಕ ಸ್ವಾಸ್ಥ್ಯ, ಭದ್ರತೆ ಮತ್ತು ಆಸ್ತಿಪಾಸ್ತಿಗಳ ಕುರಿತು ಸುಳ್ಳು ನಿರೂಪಣೆಗಳ ಆಧಾರದಲ್ಲಿ 2009ರಿಂದ 2012ರ ನಡುವೆ 4,500 ಕೋಟಿ ರೂ. ಮೌಲ್ಯದ ನಾನ್-ಕನ್ವರ್ಟಿಬಲ್ ಡಿಬೆಂಚರ್ ಗಳನ್ನು (NCD) ಖರೀದಿಸುವಂತೆ LICಯನ್ನು ಮೋಸದಿಂದ ಪ್ರೇರೇಪಿಸಿತ್ತು ಎಂದು CBI ಆಪಾದಿಸಿದೆ.
ಇದರಿಂದ ವಿಮಾ ಸಂಸ್ಥೆಗೆ 3,750 ಕೋಟಿ ರೂ.ಗಿಂತ ಅಧಿಕ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಕಂಪೆನಿಯ ವಿರುದ್ಧ ಫಾರೆನ್ಸಿಕ್ ಲೆಕ್ಕಪತ್ರ ಪರಿಶೋಧನೆಗೆ ಆದೇಶಿಸಲಾಗಿತ್ತು.
2020ರ ಅಕ್ಟೋಬರ್ 15ರಂದು ಪ್ರಕಟವಾದ ಫಾರೆನ್ಸಿಕ್ ಲೆಕ್ಕಪತ್ರ ಪರಿಶೋಧನೆಯು, ರಿಲಾಯನ್ಸ್ ಕಂಪೆನಿಯು ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಪಡೆದ ಹಣವನ್ನು ದುರುಪಯೋಗಪಡಿಸಿರುವುದನ್ನು ಬಹಿರಂಗಪಡಿಸಿತು.
ಸಬ್ಸಿಡರಿ ಕಂಪೆನಿಗಳ ಮೂಲಕ ನಿಧಿಗಳನ್ನು ಬೇರೆಡೆಗೆ ತಿರುಗಿಸುವುದು, ಸೇಲ್ಸ್ ಇನ್ ವಾಯ್ಸ್ ಫೈನಾನ್ಸಿಂಗ್ ದುರ್ಬಳಕೆ, ಕಾಲ್ಪನಿಕ ಬಿಲ್‌ಗಳ ಸೃಷ್ಟಿ, ಅಂತರ್-ಕಂಪೆನಿ ಠೇವಣಿಗಳು, ಶೆಲ್ ಕಂಪೆನಿಗಳಿಗೆ ಸಂಬಂಧಿಸಿದ ನಿಧಿಗಳ ವ್ಯವಸ್ಥಿತ ದುರುಪಯೋಗ ಇತ್ಯಾದಿ ವಿತ್ತೀಯ ಅಪರಾಧಗಳ ಆರೋಪಗಳನ್ನು ರಿಲಾಯನ್ಸ್ ಕಂಪೆನಿ ಹಾಗೂ ಅದರ ಆಡಳಿತ ವರ್ಗದ ವಿರುದ್ಧ ಹೊರಿಸಲಾಗಿದೆ.

