ಗುರುವಾರ ಅರ್ಜಿದಾರರಾದ ಪೌಲೋಮಿ ಪಾವಿನಿ ಶುಕ್ಲಾ ಮತ್ತು ನ್ಯಾಯ ನಾರಿ ಪ್ರತಿಷ್ಠಾನದ ಪರ ವಕೀಲ ಪ್ರಶಾಂತ್ ಭೂಷಣ್ ಅವರ ವಾದವನ್ನು ಆಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೊಯ್ಮಾಲ್ಯ ಬಾಗ್ಚಿ ಮತ್ತು ವಿ.ಎಂ.ಪಂಚೋಲಿ ಅವರ ಪೀಠವು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ನೋಟಿಸ್ ಹೊರಡಿಸಿದೆ.
ಪ್ರಸಕ್ತ ಶರಿಯತ್ ಉತ್ತರಾಧಿಕಾರ ನಿಯಮಗಳು ಮಹಿಳೆಯರ ವಿರುದ್ಧ 'ಸ್ಪಷ್ಟವಾಗಿ ತಾರತಮ್ಯಕಾರಿಯಾಗಿವೆ' ಎಂದು ಹೇಳಿರುವ ಅರ್ಜಿಯು, ಕುಟುಂಬದ ಆಸ್ತಿಯಲ್ಲಿ ಮಹಿಳೆಯರಿಗೆ ಅವರ ಸೋದರರಿಗೆ ನೀಡಲಾಗುವ ಪಾಲಿನ ಅರ್ಧದಷ್ಟು ಅಥವಾ ಕಡಿಮೆ ನೀಡಲಾಗುತ್ತದೆ ಎಂದು ಬೆಟ್ಟು ಮಾಡಿದೆ.
1937ರ ಕಾಯ್ದೆಯು ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂಘಿಸುತ್ತದೆ ಎಂದು ಹೇಳಿದ ಭೂಷಣ್, ಉತ್ತರಾಧಿಕಾರದ ವಿಷಯಗಳು ಸಿವಿಲ್ ಸ್ವರೂಪದ್ದಾಗಿದ್ದು, ಇದು ವಿಧಿ 25ರಡಿ ರಕ್ಷಿಸಲ್ಪಟ್ಟಿರುವ 'ಅತ್ಯಗತ್ಯ ಧಾರ್ಮಿಕ ಆಚರಣೆ'ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದರು.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅರ್ಧ ಅಥವಾ ಅದಕ್ಕೂ ಕಡಿಮೆ ಪಾಲನ್ನು ಪಡೆಯುತ್ತಾರೆ ಎಂದು ಹೇಳುವುದು ತಾರತಮ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

