ವಾಷಿಂಗ್ಟನ್: ದೇವಾಲಯ, ಗುರುದ್ವಾರ ಸೇರಿದಂತೆ ಧಾರ್ಮಿಕ ಸ್ಥಳಗಳ ಸುತ್ತ ನೂರು ಅಡಿ ವ್ಯಾಪ್ತಿಯಲ್ಲಿ ಬಫರ್ ವಲಯ ರಚಿಸಿ, ಆ ವಲಯದಲ್ಲಿ ನಡೆಯುವ ದೌರ್ಜನ್ಯ ಅಥವಾ ಬೆದರಿಕೆಯನ್ನು ಒಕ್ಕೂಟದ ವಿರುದ್ಧದ ಅಪರಾಧ (ಒಕ್ಕೂಟದ ಕಾನೂನಿನ ಉಲ್ಲಂಘನೆ) ಎಂದು ಪರಿಗಣಿಸುವ ಬಗ್ಗೆ ದ್ವಿಪಕ್ಷೀಯ ಮಸೂದೆಯೊಂದು ಅಮೆರಿಕ ಸಂಸತ್ತಿನಲ್ಲಿ ಮಂಡನೆಯಾಗಿದೆ.
ವಿಧ್ವಂಸಕ ಕೃತ್ಯಗಳಿಂದ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವ ಮಸೂದೆಯನ್ನು ಸಂಸದರಾದ ಟಾಮ್ ಸುಝ್ಝಿ ಮತ್ತು ಮ್ಯಾಕ್ಸ್ ಮಿಲ್ಲೆರ್ ಅವರು ಮಂಡಿಸಿದ್ದಾರೆ.
'ಕಳೆದ ಕೆಲವು ವರ್ಷಗಳಲ್ಲಿ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಹಲವರು ಭಯಭೀತರಾಗಿರುವುದನ್ನು ಕಂಡಿದ್ದೇನೆ. ಧಾರ್ಮಿಕ ಆಚರಣೆಯ ವೇಳೆ ಯಾರೂ ಕಿರುಕುಳಕ್ಕೆ ಒಳಗಾಗಬಾರದು' ಎಂದು ಸುಝ್ಝಿ ಹೇಳಿದ್ದಾರೆ.
'ಧಾರ್ಮಿಕ ಸ್ಥಳಗಳಲ್ಲಿ ಸುರಕ್ಷತೆಗಾಗಿ ರೂಪಿಸಿರುವ ಮಸೂದೆಯನ್ನು ಅಮೆರಿಕದಲ್ಲಿನ ಹಿಂದೂ ಸಮುದಾಯ ಸ್ವಾಗತಿಸುತ್ತದೆ' ಎಂದು ಹಿಂದೂ ಅಮೆರಿಕ ಫೌಂಡೇಷನ್‌ನ ನೀತಿ ನಿರೂಪಣೆಯ ವ್ಯವಸ್ಥಾಪಕ ಸಮೀರ್ ಕಾಲ್ರಾ ತಿಳಿಸಿದ್ದಾರೆ.

