ಕಾಸರಗೋಡು: ಭಾರತೀಯ ಪರಿಕಲ್ಪನೆಯಲ್ಲಿ ವೇದ, ಗೋವು, ಬ್ರಹ್ಮತ್ವ ಮತ್ತು ಭೂಮಿ ಸ್ತ್ರೀತ್ವದ ಸಂಕೇತವಾಗಿದ್ದು, ಇದಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡಾಗ ಮನುಕುಲದ ಉದ್ಧಾರವಾಗುವುದಾಗಿ ವಿಹಿಂಪ ಮಾತೃಸಮಿತಿಯ ನೇತಾರೆ ಸತಿ ಕೋಡೋತ್ ತಿಳಿಸಿದ್ದಾರೆ.
ಅವರು ಕಾಸರಗೋಡು ನುಳ್ಳಿಪ್ಪಾಡಿಯ ಶ್ರೀಅಯ್ಯಪ್ಪ ಸ್ವಾಮಿ ಕ್ಷೇತ್ರ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಮಾತೃಸಂಗಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ಮಾತೆ ಎಂದರೆ ಕೇವಲ ಜನ್ಮದಾತೆಯಲ್ಲ. ಆಕೆ ಗುರು ಸ್ಥಾನದ ಆಚಾರ್ಯೆ ಮಾತ್ರವಲ್ಲ ಮಾತೃಭಾವದಿಂದ ಮಗುವನ್ನು ಪೋಷಿಸುವ ಗುಣದವಳಾಗಿದ್ದಾಳೆ. ತಾಯಂದಿರು ಸತ್ಪಥದಲ್ಲಿ ನಡೆದಾಗಆ ಸಮಾಜ ಸುಭಿಕ್ಷವಾಗಿ ಬೆಳೆಯಬಲ್ಲದು ಎಂದು ತಿಳಿಸಿದರು.
ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾ ಅರವಿಂದ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯೆ ಡಾ.ವೀಣಾ ಮಂಜುನಾಥ್ ಮಾತನಾಡಿ, ಅಯ್ಯಪ್ಪ ಸ್ವಾಮಿ ಸ್ತ್ರೀ ಪುರುಷ ಎಂಬ ಭೇದವಿಲ್ಲದೆ ಎಲ್ಲವನ್ನೂ ಅನುಗ್ರಹಿಸುವ ಶಕ್ತಿಯಾಗಿದೆ. ದೈವಿಕ ಪರವಾದ ಚಟುವಟಿಕೆಗಳು ಮನೆಯಿಂದ ಆರಂಭವಾಗಬೇಕು ಎಂದವರು ತಿಳಿಸಿದರು.
ಕಾಸರಗೋಡು ನಗರಸಭಾ ಸದಸ್ಯರಾದ ಶಾರದಾ, ಕೆ.ಎಸ್.ಶ್ರುತಿ, ಎಂ.ಕೆ.ದಿವ್ಯ, ಸುಧಾರಾಣಿ, ಮಹಿಳಾ ಸಮಿತಿ ಕಾರ್ಯಾಧ್ಯಕ್ಷೆ ಜಯಶ್ರೀ ದಿವಾಕರ್, ಉದ್ಯಮಿ ಬಿಂದುದಾಸ್ ಉಪಸ್ಥಿತರಿದ್ದರು.
ಮಹಿಳಾ ಸಮಿತಿ ಕಾರ್ಯದರ್ಶಿ ಶಿಲ್ಪಾ ವರಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಆಶಾ ಶ್ರೀಧರ್ ಕೆ.ಚೆನ್ನಿಕೆರೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ನಯನಾ ಲೋಕೇಶ್ ವಂದಿಸಿದರು.



