ಕನ್ಯಾಕುಮಾರಿ: ಕನ್ಯಾಕುಮಾರಿಯಲ್ಲಿ ನಟ, ರಾಜಕಾರಣಿ ವಿಜಯ್ ನಡೆಸಿದ ರ‍್ಯಾಲಿಯ ವೇಳೆ ಅಭಿಮಾನಿಯೊಬ್ಬ ಅವರತ್ತ ಹೂವಿನ ಚೆಂಡೆಸೆದಿದ್ದು, ಇದರಿಂದ ಭಯಭೀತರಾದ ವಿಜಯ್ ತಾನು ಓಡಿಸುತ್ತಿದ್ದ ಸೈಕಲ್ ನಿಂದ ಕೆಳಗಿಳಿದು ಓಡಿರುವ ಘಟನೆ ನಡೆದಿದೆ. ಇದರ ಬೆನ್ನಿಗೇ, ಭದ್ರತಾ ಪಡೆಗಳು ಕ್ಷಿಪ್ರ ಪ್ರತಿಕ್ರಿಯೆ ತೋರಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ ಎಂದು ವರದಿಯಾಗಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬೆಂಬಲಿಗರ ಭಾರಿ ಜನಜಂಗುಳಿಯ ನಡುವೆ ನಟ ವಿಜಯ್ ಸೈಕಲ್ ತುಳಿದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಅಭಿಮಾನಿಗಳು ಹರ್ಷೋದ್ಗಾರ ಮಾಡಿದ್ದಾರೆ. ಈ ವೇಳೆ ಬೆಂಬಲಿಗನೊಬ್ಬ ಅವರತ್ತ ಹೂವಿನ ಚೆಂಡನ್ನು ಎಸೆದಿದ್ದಾನೆ. ಇದನ್ನು ಕಂಡ ವಿಜಯ್ ಗಲಿಬಿಲಿಯಿಂದ ಸೈಕಲ್ ನಿಂದ ಇಳಿದು ಓಡಿ ಹೋಗುತ್ತಿರುವುದು ಈ ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ.
ಈ ವಿಡಿಯೊ ತುಣುಕಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, "ಅದನ್ನು ಬಾಂಬ್ ಎಂದುಕೊಂಡು ವಿಜಯ್ ಓಡಿಹೋದರೆ?" ಎಂದು ಒಬ್ಬರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು, ವಿಜಯ್ ಅವರ ಸ್ಟಂಟ್ ಏನಿದ್ದರೂ ಸಿನಿಮಾಗಳಲ್ಲಿ ಮಾತ್ರ ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವು, ಭದ್ರತಾ ಲೋಪವಾಗುವಂತಹ ಇಂತಹ ತೋರಿಕೆಯ ಪ್ರಚಾರ ಬೇಕೆ ಎಂದು ಪ್ರಶ್ನಿಸಿದ್ದಾರೆ.
ಎಪ್ರಿಲ್ 23ರಂದು ತಮಿಳುನಾಡು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ.

