ಕೇಂದ್ರ ಸಚಿವ ಹಾಗೂ ರಾಜ್ಯಸಭೆಯ ಆಡಳಿತಾರೂಢ ಘಟಕದ ನಾಯಕ ಜೆ.ಪಿ. ನಡ್ಡಾ, ಹರಿವಂಶರ ಮರು ಆಯ್ಕೆ ಬಗ್ಗೆ ವಿವಿಧ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿ ಒಮ್ಮತವೊಂದಕ್ಕೆ ಬರಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, 2019ರಿಂದ ಖಾಲಿ ಬಿದ್ದಿರುವ ಲೋಕಸಭೆಯ ಉಪ ಸ್ಪೀಕರ್ ಹುದ್ದೆಯನ್ನು ತುಂಬುವ ಬಗ್ಗೆ ಚಿಂತಿಸದೆ ರಾಜ್ಯಸಭೆಯ ಉಪ ಸಭಾಪತಿ ಹುದ್ದೆಯನ್ನು ತುಂಬಲು ಚುನಾವಣೆ ನಡೆಸಲು ಆಡಳಿತಾರೂಢ ಪಕ್ಷ ತೋರಿಸುತ್ತಿರುವ ಉತ್ಸಾಹಕ್ಕೆ ಕಾಂಗ್ರೆಸ್, ಟಿಎಮ್‌ಸಿ ಮತ್ತು ಎಡ ಪಕ್ಷಗಳು ಸೇರಿದಂತೆ ಹಲವು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ರಾಜ್ಯಸಭಾ ಉಪ ಸಭಾಪತಿ ಹುದ್ದೆಯನ್ನು ತುಂಬಲು ಅಧಿಸೂಚನೆಯನ್ನು ಹೊರಡಿಸಿಲ್ಲವಾದರೂ, ಎಪ್ರಿಲ್ 16 ಅಥವಾ 17ರಂದು ಚುನಾವಣೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ. ಅಂದು ಮಹಿಳಾ ಮೀಸಲಾತಿ ಕಾನೂನಿಗೆ ತರಲಾಗಿರುವ ತಿದ್ದುಪಡಿಗೆ ಅನುಮೋದನೆ ನೀಡಲು ಸಂಸತ್‌ನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.
ರಾಜ್ಯಸಭೆಯ ಉಪಸಭಾಪತಿ ಹುದ್ದೆಗೆ ಬಲವಂತದ ನೇಮಕಾತಿಯನ್ನು ಮಾಡಲು ಸರಕಾರ ಬಯಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ''ಲೋಕಸಭೆಯ ಉಪಸ್ಪೀಕರ್ ಹುದ್ದೆಗೆ ಏಳು ವರ್ಷಗಳಿಂದ ನೇಮಕಾತಿಯನ್ನು ಮಾಡದ ಸರಕಾರವೊಂದು, ರಾಜ್ಯಸಭೆಯ ಉಪ ಸಭಾಪತಿ ಹುದ್ದೆಗೆ ನಾಲ್ಕು ದಿನಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಬಲವಂತದ ನೇಮಕಾತಿಯನ್ನು ಮಾಡಲು ಬಯಸಿದೆ'' ಎಂದು ರಮೇಶ್ ಹೇಳಿದ್ದಾರೆ.
''ಲೋಕಸಭೆಯ ಉಪ ಸ್ಪೀಕರ್ ಹುದ್ದೆ 2019ರಿಂದ ಖಾಲಿ ಬಿದ್ದಿದೆ. ರಾಜ್ಯಸಭಾ ಉಪಸಭಾಪತಿ ಹುದ್ದೆ ಕೇವಲ 10 ದಿನಗಳಿಂದ ಖಾಲಿಯಾಗಿದೆ. ಅದನ್ನು ತುಂಬಲು ಬಿಜೆಪಿಗೆ ಇಷ್ಟೊಂದು ಅವಸರ ಯಾಕೆ? ಸರಕಾರವು ಮತ್ತೊಮ್ಮೆ ಸಂಸತ್‌ಗೆ ಅವಹೇಳನ ಮಾಡುತ್ತಿದೆ'' ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ'ಬ್ರಿಯನ್ ಸಾಮಾಜಿಕ ಮಾಧ್ಯಕ 'ಎಕ್ಸ್'ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.

