ನವದೆಹಲಿ: ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ದಿನಾಚರಣೆಯ ಅಂಗವಾಗಿ ಶನಿವಾರ ಸಂಸತ್ ಆವರಣದಲ್ಲಿನ ಪ್ರೇರಣಾ ಸ್ಥಳದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪರಸ್ಪರ ಶುಭ ವಿನಿಮಯ ಮಾಡಿಕೊಂಡು ಮಾತುಕತೆ ನಡೆಸಿದ ಅಪರೂಪದ ಕ್ಷಣ ಕಂಡುಬಂದಿತು.
ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆ ಜೊತೆಗೆ ಪ್ರೇರಣಾ ಸ್ಥಳಕ್ಕೆ ಆಗಮಿಸಿದಾಗ, ರಾಹುಲ್ ಗಾಂಧಿಯವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ, ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಇತರ ಕೇಂದ್ರ ಸಚಿವರೊಂದಿಗೆ ಉಪಸ್ಥಿತರಿದ್ದರು. ಮೋದಿ ಮತ್ತು ರಾಹುಲ್ ಗಾಂಧಿ ಮುಖಾಮುಖಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡು ಕೆಲಕಾಲ ಸಂಭಾಷಣೆ ನಡೆಸಿದರು.
"ನಮಸ್ತೆ ರಾಹುಲ್ ಜೀ," ಎಂದು ಪ್ರಧಾನಿ ಮೋದಿ ಮಾತು ಆರಂಭಿಸಿದರೆ, "ನಮಸ್ತೆ ಪ್ರಧಾನಮಂತ್ರಿ ಜೀ," ಎಂದು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದರು. ಬಳಿಕ ಇಬ್ಬರೂ ಫುಲೆ ಅವರ ವಿಚಾರಗಳನ್ನು ಉಲ್ಲೇಖಿಸುತ್ತಾ ಸಂಕ್ಷಿಪ್ತವಾಗಿ ಚರ್ಚೆ ನಡೆಸಿದರೆಂದು ಸ್ಥಳದಲ್ಲಿದ್ದ ಮೂಲಗಳು ತಿಳಿಸಿವೆ.
ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಮಹಾತ್ಮ ಫುಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಮಹಾತ್ಮ ಫುಲೆ ಅವರು ತಮ್ಮ ಜೀವನವನ್ನು ಹಿಂದುಳಿದ ಸಮುದಾಯಗಳ ಹಕ್ಕುಗಳಿಗಾಗಿ ಮುಡಿಪಾಗಿಟ್ಟಿದ್ದರು. ತಾರತಮ್ಯ ಮತ್ತು ಅಸಮಾನತೆಗೆ ಅವರ ಪ್ರತಿರೋಧ ದೇಶಕ್ಕೆ ನ್ಯಾಯ ಮತ್ತು ಸಮಾನತೆಯ ದಾರಿಯನ್ನು ತೋರಿಸಿತು. ಅವರ ಆದರ್ಶಗಳು ಸಾಮಾಜಿಕ ನ್ಯಾಯದ ಪ್ರಯತ್ನಗಳಿಗೆ ಮಾರ್ಗದರ್ಶಕವಾಗಿವೆ," ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಫುಲೆ ಅವರಿಗೆ ಗೌರವ ಸಲ್ಲಿಸಿ, "ಮಹಾನ್ ಸಾಮಾಜಿಕ ಸುಧಾರಕ ಮಹಾತ್ಮ ಫುಲೆ ಅವರ ಜೀವನವು ನೈತಿಕ ಧೈರ್ಯ, ಆತ್ಮಾವಲೋಕನ ಮತ್ತು ಸಮಾಜದ ಕಲ್ಯಾಣಕ್ಕಾಗಿ ಅಚಲ ಸಮರ್ಪಣೆಯ ಸ್ಪೂರ್ತಿದಾಯಕ ಉದಾಹರಣೆ," ಎಂದು ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ.

