ಟೆಹರಾನ್: ಹೊರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಎಲ್ಲ ಹಡಗುಗಳಿಗೆ ದಿಗ್ಬಂಧನ ಹೇರುವುದಾಗಿ ಬೆದರಿಕೆ ಒಡ್ಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್ ತಿರುಗೇಟು ನೀಡಿದೆ. ಹೊರ್ಮುಜ್‌ಗೆ ದಿಗ್ಬಂಧನ ಹೇರಿದ್ದೇ ಆದರೆ, ಒಮಾನ್ ಹಾಗೂ ಪರ್ಷಿಯಾ ಕೊಲ್ಲಿಯಾದ್ಯಂತ ಇರುವ ಯಾವುದೇ ಬಂದರು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಪರ್ಷಿಯಾದ ಕೊಲ್ಲಿ ಮತ್ತು ಒಮಾನ್‌ನ ಸಮುದ್ರದಲ್ಲಿರುವ ಭದ್ರತೆಯು ಎಲ್ಲರಿಗೂ ಸೇರಬೇಕು. ಇಲ್ಲವೇ ಯಾರೊಬ್ಬರಿಗೂ ಇಲ್ಲ ಎಂದು ಸೇನೆ ಹೇಳಿದೆ. ಇದು ಗಡಿ ಬಳಿ ಉದ್ವಿಘ್ನತೆಯ ಮುನ್ಸೂಚನೆಯಾಗಿದೆ ಎಂಬುದಾಗಿ ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಐಬಿ ವರದಿ ಮಾಡಿದೆ
'ಈ ಪ್ರದೇಶದ ಯಾವ ಬಂದರೂ ಸುರಕ್ಷಿತವಾಗಿ ಉಳಿಯುವುದಿಲ್ಲ' ಎಂದು ಇರಾನ್ ಸೇನೆ ಬೆದರಿಸಿದೆ ಎಂದೂ ಉಲ್ಲೇಖಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷವನ್ನು ಶಾಂತಿಯುತವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ ಜೊತೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಸಿದ ಮಾತುಕತೆ ವಿಫಲವಾದ ಬೆನ್ನಲ್ಲೇ, ಟ್ರಂಪ್ ಬೆದರಿಕೆ ಹಾಕಿದ್ದರು.
'ಹೊರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಎಲ್ಲ ಹಡಗುಗಳಿಗೆ ತಕ್ಷಣದಿಂದಲೇ ದಿಗ್ಬಂಧನ ವಿಧಿಸಲಾಗುವುದು. ಇರಾನ್‌ಗೆ ಶುಲ್ಕ ಪಾವತಿಸಿ, ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುವ ಹಡಗುಗಳ ಸಂಚಾರಕ್ಕೆ ತಡೆಯೊಡ್ಡಲಾಗುವುದು' ಎಂದು ಹೇಳಿದ್ದರು. ಇದಕ್ಕೆ ಇರಾನ್ ಪ್ರತಿಕ್ರಿಯಿಸಿದೆ.

