ಟೆಹರಾನ್: ಗಲ್ಫ್ ಪ್ರದೇಶದ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಕ್ರಮವನ್ನು ಇರಾನ್ ಸಶಸ್ತ್ರ ಪಡೆಗಳು "ಕಾನೂನುಬಾಹಿರ" ಹಾಗೂ "ಕಡಲ್ಗಳ್ಳತನಕ್ಕೆ ಸಮಾನವಾದ ಕೃತ್ಯ" ಎಂದು ಖಂಡಿಸಿವೆ.
ಇರಾನ್‌ನ ಸರ್ಕಾರಿ ಮಾಧ್ಯಮ IಖIಃ ವರದಿ ಪ್ರಕಾರ, ಅರೇಬಿಯನ್ ಕೊಲ್ಲಿ ಮತ್ತು ಒಮಾನ್ ಸಮುದ್ರದ ಬಂದರುಗಳ ಕುರಿತು ಇರಾನ್ ಸಶಸ್ತ್ರ ಪಡೆಗಳ ಏಕೀಕೃತ ಕಮಾಂಡ್ ತನ್ನ ನಿಲುವು ಪ್ರಕಟಿಸಿದೆ.
ಈ ಬಂದರುಗಳು ಯಾರೊಬ್ಬರ ಏಕಾಧಿಪತ್ಯದಲ್ಲಿಲ್ಲ ಎಂದು ಕಮಾಂಡ್ ಸ್ಪಷ್ಟಪಡಿಸಿದ್ದು, ಪ್ರದೇಶದಲ್ಲಿನ ಸಾಗಣೆ ಹಾಗೂ ಸಮುದ್ರ ಸಂಚಾರವು ಸಮಾನ ಹಕ್ಕಿನ ಆಧಾರದ ಮೇಲೆ ನಡೆಯಬೇಕು ಎಂದು ತಿಳಿಸಿದೆ.
"ಇರಾನ್ ಇಸ್ಲಾಮಿಕ್ ಗಣರಾಜ್ಯದ ಸಶಸ್ತ್ರ ಪಡೆಗಳು ದೇಶದ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವುದನ್ನು ನೈಸರ್ಗಿಕ ಹಾಗೂ ಕಾನೂನುಬದ್ಧ ಕರ್ತವ್ಯವೆಂದು ಪರಿಗಣಿಸುತ್ತವೆ. ಅದರಂತೆ, ನಮ್ಮ ದೇಶದ ಪ್ರಾದೇಶಿಕ ನೀರಿನಲ್ಲಿ ಸಾರ್ವಭೌಮತ್ವವನ್ನು ಚಲಾಯಿಸುವುದು ಇರಾನ್ ರಾಷ್ಟ್ರದ ನೈಸರ್ಗಿಕ ಹಕ್ಕಾಗಿದೆ," ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಹಾರ್ಮುಝ್ ಜಲಸಂಧಿಯ ಮೂಲಕ "ಶತ್ರು-ಸಂಯೋಜಿತ ಹಡಗುಗಳಿಗೆ" ಸಂಚಾರ ಹಕ್ಕಿಲ್ಲ ಎಂದು ಇರಾನ್ ಎಚ್ಚರಿಸಿದ್ದು, ಟೆಹ್ರಾನ್ ವಿಧಿಸಿರುವ ನಿಯಮಗಳಿಗೆ ಒಳಪಟ್ಟು ಇತರ ಹಡಗುಗಳಿಗೆ ಮಾತ್ರ ಹಾದುಹೋಗಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.
ಅಂತರರಾಷ್ಟ್ರೀಯ ನೀರಿನಲ್ಲಿ ಹಡಗುಗಳ ಚಲನವಲನದ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳನ್ನು ಇರಾನ್ ಅಪರಾಧಾತ್ಮಕ ಕ್ರಮವೆಂದು ಟೀಕಿಸಿದ್ದು, ಅದನ್ನು "ಕಾನೂನುಬಾಹಿರ ಕೃತ್ಯ" ಹಾಗೂ "ಕಡಲ್ಗಳ್ಳತನಕ್ಕೆ ಸಮಾನ" ಎಂದು ವಿವರಿಸಿದೆ.
ಬಂದರುಗಳ ಭದ್ರತೆಗೆ ಯಾವುದೇ ರೀತಿಯ ಬೆದರಿಕೆ ಉಂಟಾದಲ್ಲಿ, ಈ ಪ್ರದೇಶದ ಯಾವುದೇ ಬಂದರು ಸುರಕ್ಷಿತವಾಗಿರುವುದಿಲ್ಲ ಎಂದು ಇರಾನ್ ಸಶಸ್ತ್ರ ಪಡೆಗಳು ಎಚ್ಚರಿಕೆ ನೀಡಿವೆ.

