ರಿಯಾದ್: ಕಳೆದ ವರ್ಷ ಸಹಿ ಹಾಕಲಾದ ಜಂಟಿ ಕಾರ್ಯತಂತ್ರದ ರಕ್ಷಣಾ ಒಪ್ಪಂದದಡಿ ಸುಮಾರು 13,000 ಸೈನಿಕರು ಮತ್ತು 10ರಿಂದ 18 ಯುದ್ಧ ವಿಮಾನಗಳನ್ನು ಒಳಗೊಂಡ ಪಾಕಿಸ್ತಾನಿ ಮಿಲಿಟರಿ ತುಕಡಿ ಸೌದಿ ಅರೇಬಿಯಾವನ್ನು ತಲುಪಿದೆ ಎಂದು ಗಲ್ಫ್ ರಾಷ್ಟ್ರವು ತಿಳಿಸಿದೆ ಎಂದು ʼರಾಯಿಟರ್ಸ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಪೂರ್ವ ವಲಯದಲ್ಲಿರುವ ಕಿಂಗ್ ಅಬ್ದುಲ್ ಅಝೀಝ್ ವಾಯುನೆಲೆಗೆ ಈ ತುಕಡಿ ನಿಯೋಜಿಸಲಾಗಿದೆ. ಪಾಕಿಸ್ತಾನ ವಾಯುಪಡೆಯ ಫೈಟರ್ ಜೆಟ್ ಗಳು ಹಾಗೂ ಬೆಂಬಲ ವಿಮಾನಗಳು ಇದರ ಭಾಗವಾಗಿವೆ.
ಉಭಯ ದೇಶಗಳ ಮಿಲಿಟರಿ ಸಹಕಾರ ಹೆಚ್ಚಿಸಿ, ಕಾರ್ಯಾಚರಣಾ ಸಿದ್ಧತೆಯನ್ನು ಬಲಪಡಿಸಿ, ಪ್ರಾದೇಶಿಕ ಹಾಗೂ ಜಾಗತಿಕ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡುವ ಉದ್ದೇಶದಿಂದ ಈ ನಿಯೋಜನೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಉಭಯ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ರಕ್ಷಣಾ ಒಪ್ಪಂದದಡಿ ಪಡೆಗಳು ಮತ್ತು ಯುದ್ಧ ವಿಮಾನಗಳನ್ನು ಕಳುಹಿಸಿರುವುದನ್ನು ಪಾಕಿಸ್ತಾನ ಸರ್ಕಾರದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಈ ಒಪ್ಪಂದದ ಪ್ರಕಾರ, ಒಂದು ದೇಶದ ಮೇಲಿನ ಯಾವುದೇ ದಾಳಿಯನ್ನು ಇನ್ನೊಂದು ದೇಶದ ಮೇಲಿನ ದಾಳಿಯಾಗಿ ಪರಿಗಣಿಸಲಾಗುತ್ತದೆ.
ಅಂತರರಾಷ್ಟ್ರೀಯ ವ್ಯವಹಾರಗಳ ತಜ್ಞ ಮೊಹಮ್ಮದ್ ಮೆಹದಿ ಅವರ ಪ್ರಕಾರ, ಈ ನಿಯೋಜನೆ ಕಳೆದ ತಿಂಗಳಲ್ಲೇ ನಡೆದಿದ್ದರೂ ಸೌದಿ ಅಧಿಕಾರಿಗಳು ಅದನ್ನು ಈಗ ಮಾತ್ರ ಬಹಿರಂಗಪಡಿಸಿದ್ದಾರೆ. ಈಗಾಗಲೇ ಸುಮಾರು 10,000 ಪಾಕಿಸ್ತಾನಿ ಸೈನಿಕರು ಸೌದಿ ಅರೇಬಿಯಾದಲ್ಲಿ ಇದ್ದು, ಇದೀಗ ಕನಿಷ್ಠ 13,000 ಸೈನಿಕರು ಹಾಗೂ 10ರಿಂದ 18 ಯುದ್ಧ ವಿಮಾನಗಳು ಅಲ್ಲಿವೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನಿ ಸೈನಿಕರು ಮತ್ತು ಯುದ್ಧ ವಿಮಾನಗಳು ಸೌದಿ ಅರೇಬಿಯಾದ ರಕ್ಷಣಾತ್ಮಕ ಉದ್ದೇಶಗಳಿಗಾಗಿ ಮಾತ್ರ ನಿಯೋಜಿಸಲ್ಪಟ್ಟಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಕೊಲ್ಲಿಯಲ್ಲಿರುವ ಅಮೆರಿಕದ ಸೈನಿಕ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಪಾಕಿಸ್ತಾನವು ಕಳೆದ ತಿಂಗಳು ಸೌದಿ ಅರೇಬಿಯಾಕ್ಕೆ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಗಳನ್ನೂ ಕಳುಹಿಸಿದೆ ಎಂದು ಮತ್ತೊಬ್ಬ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆ ಸೌದಿ ಅರೇಬಿಯಾ ತೋರಿದ 'ಗಮನಾರ್ಹ ಸಂಯಮ'ವನ್ನು ಪಾಕಿಸ್ತಾನ ಪ್ರಧಾನಿ ಶ್ಲಾಘಿಸಿದ್ದಾರೆ.

