ಗ್ವಾಲಿಯರ್: ಮಧ್ಯ ಪ್ರದೇಶದ ಐತಿಹಾಸಿಕ ಗ್ವಾಲಿಯರ್ ಕೋಟೆ ಬಳಿ ರಷ್ಯಾ ಮಹಿಳೆಗೆ ಹಿಂದಿ ಭಾಷೆಯಲ್ಲಿ ನಿಂದಿಸಿ ರೀಲ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ವಿದೇಶಿಗರ ಗುಂಪೊಂದು ಕೋಟೆಗೆ ಭೇಟಿ ನೀಡಿದ್ದ ವೇಳೆ ವಿಡಿಯೊ ಚಿತ್ರೀಕರಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಮನೀಶ್ ಯಾದವ್ ಹೇಳಿದ್ದಾರೆ. ಬಂಧಿತನನ್ನು ರಾಧೆ ಗುರ್ಜರ್ ಎಂದು ಗುರುತಿಸಲಾಗಿದೆ.
'ರಾಧೆ ಗುರ್ಜರ್ ರಷ್ಯಾದ ಮಹಿಳಾ ಪ್ರವಾಸಿಯೊಬ್ಬರನ್ನು ತಮ್ಮೊಂದಿಗೆ ರೀಲ್ ಮಾಡುವಂತೆ ಮನವೊಲಿಸಿದ್ದಾನೆ. ಮಹಿಳೆಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಆರೋಪಿಯು ನಿಂದನೀಯ ಭಾಷೆಯನ್ನು ಬಳಸಿ ರೀಲ್ ಮಾಡಿದ್ದಾನೆ. ವಿಡಿಯೊದಲ್ಲಿ ಅಶ್ಲೀಲ ಪದ ಬಳಸಿದರೂ ಹಿಂದಿ ಅರ್ಥವಾಗದ ಕಾರಣ ಮಹಿಳೆ ನಗುತ್ತಲೇ ಇದ್ದರು' ಎಂದು ಯಾದವ್ ಹೇಳಿದ್ದಾರೆ.
ಗುರ್ಜರ್ ನಂತರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ. ನಂತರ, ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
'ಪರಾರಿಯಾಗಿದ್ದ ಗುರ್ಜರ್‌ನನ್ನು ಬಂಧಿಸಿ ಗ್ವಾಲಿಯರ್‌ಗೆ ಕರೆತರಲಾಗಿದೆ. ಈ ವಿಡಿಯೊ ಗ್ವಾಲಿಯರ್ ಮತ್ತು ದೇಶದ ಪ್ರತಿಷ್ಠೆಗೆ ಕಳಂಕ ತಂದಿದೆ. ಗುರ್ಜರ್ ಅವರು ವಿಡಿಯೊವನ್ನು ಡಿಲೀಟ್ ಮಾಡಿರುವುದಾಗಿ ಹೇಳಿಕೊಂಡಿದ್ದು, ಕ್ಷಮೆಯಾಚಿಸಿದ್ದಾರೆ. ಭವಿಷ್ಯದಲ್ಲಿ ಅಂತಹ ವಿಡಿಯೊ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೂ, ಪ್ರಕರಣದ ತನಿಖೆ ಮುಂದುವರೆದಿದೆ' ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

