ತಿರುವನಂತಪುರಂ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ಸಮಯ ಮುಗಿದ ನಂತರ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತದಾರರಿಗೆ ಧನ್ಯವಾದ ಅರ್ಪಿಸಿದರು.
ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ಎಲ್ಲಾ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆ ಮತ್ತು ಶುಭಾಶಯಗಳನ್ನು ವ್ಯಕ್ತಪಡಿಸುವುದಾಗಿ ಮುಖ್ಯಮಂತ್ರಿ ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಬೇಸಿಗೆಯ ತೀವ್ರ ಬಿಸಿಲಿನ ನಡುವೆಯೂ ಪ್ರಚಾರದ ಅವಧಿ ಕಡಿಮೆ ಇದ್ದರೂ ಕೆಲಸ ಮಾಡಿದ ರಾಜಕೀಯ ಕಾರ್ಯಕರ್ತರ ಉತ್ಸಾಹ ಗಮನಾರ್ಹವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರತಿಕೂಲ ಹವಾಮಾನದ ಹೊರತಾಗಿಯೂ ಮತಗಟ್ಟೆಗಳಿಗೆ ಬಂದ ಜನರು ಕೇರಳದ ಪ್ರಜಾಪ್ರಭುತ್ವದ ಉನ್ನತ ಪ್ರಜ್ಞೆ ಮತ್ತು ದೇಶದ ಮೇಲಿನ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಶಾಂತಿಯುತವಾಗಿ ಪೂರ್ಣಗೊಂಡಿರುವುದು ದೊಡ್ಡ ಸಾಧನೆ ಎಂದು ಮುಖ್ಯಮಂತ್ರಿ ನಿರ್ಣಯಿಸಿದರು.
ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಶ್ರಮಿಸಿದ ಚುನಾವಣಾ ಅಧಿಕಾರಿಗಳು, ಪೆÇಲೀಸ್ ಮತ್ತು ಕೇಂದ್ರ ಸೇನಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು ಸೇರಿದಂತೆ ಎಲ್ಲರನ್ನೂ ಅವರು ಅಭಿನಂದಿಸಿದರು.
ಪ್ರಜಾಪ್ರಭುತ್ವದ ಮನೋಭಾವ ಮತ್ತು ಸಾರ್ವಜನಿಕ ಭಾಗವಹಿಸುವಿಕೆಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ, "ನವ ಕೇರಳಕ್ಕಾಗಿ ನಾವೆಲ್ಲರೂ ಒಟ್ಟಾಗಿ ಮುಂದುವರಿಯೋಣ" ಎಂದು ಕರೆ ನೀಡಿದರು.

