ಹಜಾರಿಬಾಗ್: ಇಲ್ಲಿನ ಕುಸುಂಭ ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು ಉಳಿಸಿಕೊಳ್ಳಬೇಕೆಂದು ಮಾಟಗಾತಿಯ ಮಾತು ನಂಬಿ ಮಗಳನ್ನೇ ನರಬಲಿ ನೀಡಿದ ತಾಯಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಬಾಲಕಿಯ ತಾಯಿ ರೇಶ್ಮಿ ದೇವಿ (35), ಮಾಟಗಾತಿ ಶಾಂತಿ ದೇವಿ (55 ) ಮತ್ತು ಭೀಮ್ ರಾಮ್ (40) ಬಂಧಿತರು.
ಆರೋಪಿಗಳು ಒಂದೇ ಗ್ರಾಮದವರಾಗಿದ್ದಾರೆ. ಮಾಟಗಾತಿಯ ಮಾತು ನಂಬಿ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು ಎಂದು ಹಜಾರಿಬಾಗ್ ಎಸ್ಪಿ ಅಂಜನಿ ಅಂಜನ್ ಮತ್ತು ಡಿಐಜಿ ಅಂಜನಿ ಝಾ ಅವರು ಬುಧವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಮಾನಸಿಕ ಮತ್ತು ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ಕಿರಿಯ ಮಗನ ಚಿಕಿತ್ಸೆಗಾಗಿ ರೇಶ್ಮಿ ಅವರು ಮಾಟಗಾತಿಯ ಬಳಿ ಹೋಗುತ್ತಿದ್ದರು. ಮಗನ ಕಾಯಿಲೆಗಳನ್ನು ಗುಣಪಡಿಸಲು ಕನ್ಯೆಯನ್ನು ಬಲಿ ನೀಡಬೇಕು ಎಂದು ಮಾಟಗಾತಿ ತಿಳಿಸಿದ್ದರು' ಎಂದು ಅಂಜನಿ ಅಂಜನ್ ವಿವರಿಸಿದರು.
ಮಾರ್ಚ್ 24ರಂದು ರಾತ್ರಿ ಬಾಲಕಿಯನ್ನು ಮಾಟಗಾತಿಯ ಮನೆಯಲ್ಲಿ ರೇಶ್ಮಿ ಮತ್ತು ಭೀಮ್ ರಾಮ್ ಕತ್ತು ಹಿಸುಕಿ ಕೊಂದಿದ್ದಾರೆ. ಬಳಿಕ ಆಕೆಯ ಮೃತದೇಹವನ್ನು ಹೂತು ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಮಗಳನ್ನು ಅಪಹರಿಸಲಾಗಿದೆ ಎಂದು ರೇಶ್ಮಿ ಆರೋಪಿಸಿದ್ದರು. ಮಾರ್ಚ್ 25ರಂದು ಬಾಲಕಿಯ ಶವ ಗ್ರಾಮದ ಹೊಲದಲ್ಲಿ ಪತ್ತೆಯಾಗಿತ್ತು. ಇದು ಅತ್ಯಾಚಾರ ಎಂದು ಆರೋಪಿಸುವ ಮೂಲಕ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಮೂವರೂ ಆರೋಪಿಗಳು ಯತ್ನಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಯಲ್ಲಿ ಅವರ ಆರೋಪ ಸಾಬೀತಾಗಿಲ್ಲ' ಎಂದು ಅಂಜನ್ ತಿಳಿಸಿದರು.
ಮಾಧ್ಯಮಗಳ ವರದಿ ಗಮನಿಸಿದ ಜಾರ್ಖಂಡ್ ಹೈಕೋರ್ಟ್ ಸೋಮವಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿತ್ತು.
ಹತ್ಯೆಯನ್ನು ಖಂಡಿಸಿ ವಿರೋಧ ಪಕ್ಷ ಬಿಜೆಪಿ ಸೋಮವಾರ ಹಜಾರಿಬಾಗ್ನಲ್ಲಿ 12 ಗಂಟೆ ಬಂದ್ ನಡೆಸಿತ್ತು.

