HEALTH TIPS

ದುರಾಸೆ, ಆಮಿಷಗಳಿಗೆ ಬಲಿಯಾದ ನ್ಯಾಯಾಧೀಶರನ್ನು ವ್ಯವಸ್ಥೆಯಿಂದ ಹೊರದಬ್ಬಬೇಕು: ನ್ಯಾ. ಬಿ.ವಿ. ನಾಗರತ್ನ

ಬೆಂಗಳೂರು: ತಮ್ಮ ಆದಾಯದ ಮೂಲಗಳಲ್ಲಿ ಬದುಕಲು ಸಾಧ್ಯವಾಗದೆ ದುರಾಸೆ ಹಾಗೂ ಆಮಿಷಗಳಿಗೆ ಬಲಿಯಾಗುವ ನ್ಯಾಯಾಧೀಶರನ್ನು ನ್ಯಾಯಾಂಗ ವ್ಯವಸ್ಥೆಯಿಂದ ಹೊರದಬ್ಬಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ನಡೆದ 'ಎಐ ಯುಗದಲ್ಲಿ ನ್ಯಾಯಾಂಗ ವ್ಯವಸ್ಥೆ' ವಿಷಯಾಧಾರಿತವಾಗಿ ನಡೆದ 22ನೇ ದ್ವೈವಾರ್ಷಿಕ ರಾಜ್ಯ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ಸಂಬಳ ಮತ್ತು ಭತ್ಯೆಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ 2ನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿರುವುದಾಗಿ ತಿಳಿಸಿದರು.

"ಜಿಲ್ಲಾ ನ್ಯಾಯಾಂಗದಲ್ಲಿ ನ್ಯಾಯಾಧೀಶರ ಸಂಬಳ ಹಾಗೂ ಭತ್ಯೆಗಳು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲೂ ನ್ಯಾಯಾಧೀಶರು ತಮ್ಮ ಆದಾಯದ ಮಿತಿಯೊಳಗೆ ಬದುಕಲು ಸಾಧ್ಯವಾಗದಿದ್ದರೆ ಮತ್ತು ದುರಾಸೆಗೆ ಒಳಗಾದರೆ, ಅವರನ್ನು ವ್ಯವಸ್ಥೆಯಿಂದ ದೂರ ಮಾಡುವುದು ಅನಿವಾರ್ಯ," ಎಂದು ಅವರು ಹೇಳಿದರು.

ನ್ಯಾಯಾಧೀಶರು ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯಬಾರದು ಎಂದು ಎಚ್ಚರಿಸಿದ ಅವರು, ಈ ಒತ್ತಡವು ಸಹೋದ್ಯೋಗಿಗಳಿಂದಲೂ ಬರಬಹುದು ಎಂದು ಸೂಚಿಸಿದರು.

"ನ್ಯಾಯಾಧೀಶರು ಬಾಹ್ಯ ಒತ್ತಡಗಳಿಂದ ಹಾಗೂ ಸಹೋದ್ಯೋಗಿಗಳ ಪ್ರಭಾವದಿಂದ ಸಂಪೂರ್ಣ ಮುಕ್ತರಾಗಿರಬೇಕು. ಧೈರ್ಯ ಮತ್ತು ಸ್ವಾತಂತ್ರ್ಯದಿಂದ ತೀರ್ಮಾನ ಕೈಗೊಳ್ಳಬೇಕು. ತೀರ್ಪು ನೀಡುವ ವೇಳೆ ಯಾವುದೇ 'ಸಮನ್ವಯ' ಇರಬಾರದು. ಅದು ನ್ಯಾಯಾಂಗಕ್ಕೆ ಕಪ್ಪು ಚುಕ್ಕೆ. ಜನರಿಗೂ ದೇಶಕ್ಕೂ ನ್ಯಾಯ ನೀಡುವುದು ನಮ್ಮ ಕರ್ತವ್ಯ ಎಂಬ ಅರಿವು ನ್ಯಾಯಾಧೀಶರಲ್ಲಿ ಇರಬೇಕು," ಎಂದು ನ್ಯಾಯಮೂರ್ತಿ ಬಿ. ವಿ. ನಾಗರತ್ನ ಹೇಳಿದರು.

"ಜಿಲ್ಲಾ ನ್ಯಾಯಾಧೀಶರಿಗೆ ರಕ್ಷಣೆ, ಬೆಂಬಲ ನೀಡುವುದು ಹೈಕೋರ್ಟ್‌ಗಳ ಹೊಣೆ. ಬಡ್ತಿ, ಹುದ್ದೆ ಮತ್ತು ವರ್ಗಾವಣೆಗಳಲ್ಲಿ 235ನೇ ವಿಧಿ ನ್ಯಾಯಯುತವಾಗಿ ಅನ್ವಯವಾಗಬೇಕು. ಜಿಲ್ಲಾ ನ್ಯಾಯಾಧೀಶರ ಸ್ವಾತಂತ್ರ್ಯ ಕಾಪಾಡಲು ಹೈಕೋರ್ಟ್‌ಗಳ ಪಾರದರ್ಶಕ ಆಡಳಿತ ಅಗತ್ಯ. ರಿಜಿಸ್ಟ್ರಿಯೂ ಸ್ಪಂದನಶೀಲವಾಗಿರಬೇಕು. ನ್ಯಾಯಾಂಗ ಅಧಿಕಾರಿಗಳು ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಭಾವನೆ ಬರಬಾರದು ಎಂದು ಅವರು ಉಲ್ಲೇಖಿಸಿದರು.

"ಜಿಲ್ಲಾ ನ್ಯಾಯಾಂಗದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಸುರಕ್ಷತೆ ಮತ್ತು ಗೌರವಯುತ ಕೆಲಸದ ವಾತಾವರಣ ಅಗತ್ಯ. ಇದು ಮೂಲಸೌಕರ್ಯಕ್ಕಷ್ಟೇ ಸೀಮಿತವಲ್ಲ; ಕಿರುಕುಳದಿಂದ ರಕ್ಷಣೆಯನ್ನೂ ಒಳಗೊಂಡಿದೆ," ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಆಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಸಿಎಂ ಸಿದ್ದರಾಮಯ್ಯ, ನ್ಯಾಯಮೂರ್ತಿ ಅರವಿಂದ್ ಕುಮಾರ್, ನ್ಯಾಯಮೂರ್ತಿ ವಿಭು ಭಕ್ರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries