HEALTH TIPS

ಇರಾನ್ ಯುದ್ಧದಿಂದ 4.63 ಲಕ್ಷ ಕೋಟಿ ತೈಲ ನಷ್ಟ: ಚೇತರಿಕೆಗೆ ವರ್ಷಗಳೇ ಬೇಕು!

ಲಂಡನ್‌: 50 ದಿನಗಳ ಹಿಂದೆ ಇರಾನ್‌ ಯುದ್ಧ ಆರಂಭವಾದ ನಂತರ ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 50 ಬಿಲಿಯನ್‌ ಡಾಲರ್‌ (4.63 ಲಕ್ಷ ಕೋಟಿ) ಮೊತ್ತದ ಕಚ್ಚಾ ತೈಲ ಉತ್ಪಾದನೆ ಸ್ಥಗಿತಗೊಂಡಿದೆ. ಜಾಗತಿಕವಾಗಿ ಇದರ ಪರಿಣಾಮಗಳು ಹಲವು ತಿಂಗಳುಗಳವರೆಗೆ ಅಥವಾ ವರ್ಷಗಳವರೆಗೂ ಇರಲಿವೆ ಎಂದು ಅಂತರರಾಷ್ಟ್ರೀಯ ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.

ಲೆಬನಾನ್‌ ಹಾಗೂ ಇಸ್ರೇಲ್‌ ನಡುವಣ ತಾತ್ಕಾಲಿಕ ಕದನ ವಿರಾಮದ ಹಿನ್ನೆಲೆಯಲ್ಲಿ ಹೊರ್ಮುಜ್‌ ಜಲಸಂದಿಯನ್ನು ಸಂಚಾರಕ್ಕೆ ಸಂಪೂರ್ಣ ಮುಕ್ತಗೊಳಿಸುತ್ತಿರುವುದಾಗಿ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಜಿ ಶುಕ್ರವಾರ ಘೋಷಿಸಿದ್ದರು. ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು, ಶೀಘ್ರದಲ್ಲೇ ಯುದ್ಧ ಅಂತ್ಯಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಫೆಬ್ರುವರಿ 28ರಂದು ಸಂಘರ್ಷ ಆರಂಭವಾದಾಗಿನಿಂದ ಸುಮಾರು 50 ಕೋಟಿ ಬ್ಯಾರೆಲ್‌ಗೂ ಹೆಚ್ಚು ಕಚ್ಚಾ ತೈಲ ಮತ್ತು ಅನಿಲವು ಜಾಗತಿಕ ಮಾರುಕಟ್ಟೆಯಿಂದ ಹೊರಗುಳಿದಿದೆ. ಇದು, ಆಧುನಿಕ ಕಾಲಘಟ್ಟದಲ್ಲಿ ಇಂಧನ ಪೂರೈಕೆಗೆ ಎದುರಾದ ಅತಿದೊಡ್ಡ ತೊಡಕು ಎಂಬುದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆ ಕುರಿತ ಮಾಹಿತಿ ನೀಡುವ 'ಕೆಪ್ಲರ್‌' ತಿಳಿಸಿದೆ.

ನಷ್ಟವಾದ ಇಂಧನದ ಮಹತ್ವ

50 ಕೋಟಿ ಬ್ಯಾರೆಲ್‌ ತೈಲ ನಷ್ಟವನ್ನು ಸಂಶೋಧನಾ ಸಂಸ್ಥೆ 'ವುಡ್ ಮೆಕೆಂಜಿ'ಯ ಪ್ರಧಾನ ವಿಶ್ಲೇಷಕ ಇಯಾನ್ ⁠ಮೊವಾಟ್ ಬೇರೆಯದ್ದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಅಷ್ಟು ತೈಲ ಇಲ್ಲದಿದ್ದರೆ, ಜಾಗತಿಕವಾಗಿ 10 ವಾರಗಳವರೆಗೆ ವಿಮಾನಯಾನ ಸಂಚಾರ ಸ್ಥಗಿತಗೊಳ್ಳಲಿದೆ. ಇಲ್ಲವೇ, ಜಾಗತಿಕವಾಗಿ ಯಾವುದೇ ವಾಹನ 11 ದಿನಗಳವರೆಗೆ ರಸ್ತೆಗಿಳಿಯುವುದಿಲ್ಲ ಅಥವಾ ಜಾಗತಿಕ ಆರ್ಥಿಕತೆಗೆ ಐದು ದಿನಗಳವರೆಗೆ ತೈಲ ಸಾಗಣೆ ಬಂದ್ ಆಗಲಿದೆ ಎಂದಿದ್ದಾರೆ.

50 ಕೋಟಿ ಬ್ಯಾರೆಲ್‌ ತೈಲವು ಇಡೀ ಅಮೆರಿಕದ ಒಂದು ತಿಂಗಳ ಬೇಡಿಕೆಗೆ ಸಮ ಎಂದು ರಾಯಿಟರ್ಸ್‌ ಅಂದಾಜಿಸಿದೆ.

ಅಮೆರಿಕ ಸೇನೆಗೆ ಸುಮಾರು ಆರು ವರ್ಷಗಳ ವರೆಗೆ ಇಷ್ಟು ಇಂಧನ ಬೇಕಾಗುತ್ತದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ⁠ಜಗತ್ತಿನಾದ್ಯಂತ ಇರುವ ಎಲ್ಲ ಅಂತರರಾಷ್ಟ್ರೀಯ ಹಡಗು ಮಾರುಕಟ್ಟೆಯನ್ನು ಇಷ್ಟು ಇಂಧನವನ್ನು ಬಳಸಿಕೊಂಡು ಸುಮಾರು ನಾಲ್ಕು ತಿಂಗಳವರೆಗೆ ನಿರ್ವಹಿಸಬಹುದು ಎಂಬ ಲೆಕ್ಕಾಚಾರಗಳೂ ಪ್ರಕಟವಾಗಿವೆ.

ಸಂಘರ್ಷದಿಂದಾಗಿ ಅರಬ್ ರಾಷ್ಟ್ರಗಳಲ್ಲಿ ಮಾರ್ಚ್‌ ವೇಳೆ ನಿತ್ಯ ಸುಮಾರು 80 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲ ಉತ್ಪಾದನೆಗೆ ಹಿನ್ನಡೆಯಾಗಿದೆ. ಇದು, ಜಗತ್ತಿನ ಪ್ರಮುಖ ತೈಲ ಕಂ‍ಪನಿಗಳಾದ ಎಕ್ಸಾನ್‌ ಮೊಬಿಲ್‌ ಮತ್ತು ಚೆವ್ರಾನ್‌ ಎರಡರ ಒಟ್ಟು ಉತ್ಪಾದನಾ ಸಾಮರ್ಥ್ಯಕ್ಕೆ ಸಮ.

ಸೌದಿ ಅರೇಬಿಯಾ, ಕತಾರ್, ಯುಎಇ, ಕುವೈತ್, ಬಹ್ರೇನ್ ಮತ್ತು ಒಮಾನ್‌ ದೇಶಗಳಿಂದ ಫೆಬ್ರುವರಿಯಲ್ಲಿ ಸುಮಾರು 196 ಲಕ್ಷ ಬ್ಯಾರೆಲ್‌ನಷ್ಟು ಜೆಟ್ ಇಂಧನ ರಫ್ತು ಮಾಡಲಾಗಿತ್ತು. ಅದು, ಮಾರ್ಚ್ ಮತ್ತು ಏಪ್ರಿಲ್‌ ವೇಳೆಗೆ ಕೇವಲ 41 ಲಕ್ಷ ಬ್ಯಾರೆಲ್‌ಗೆ ಇಳಿದಿದೆ ಎನ್ನಲಾಗಿದೆ. ರಫ್ತು ಪ್ರಮಾಣದಲ್ಲಿ ಆಗಿರುವ ಈ ನಷ್ಟವು, ನ್ಯೂಯಾರ್ಕ್‌ನ ಜಾನ್‌ ಎಫ್‌ ಕೆನಡಿ ವಿಮಾನ ನಿಲ್ದಾಣ ಮತ್ತು ಲಂಡನ್‌ನ ಹೀಥ್ರೂ ನಡುವೆ ಸುಮಾರು 20,000 ಸುತ್ತು ಪ್ರಯಾಣಕ್ಕೆ ಸಾಕಾಗುತ್ತಿತ್ತು ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಯಥಾಸ್ಥಿತಿ ತಲುಪಲು ವರ್ಷಗಳೇ ಬೇಕಾದೀತು!

ಇರಾನ್ ಸಚಿವ ಅರಾಘ್ಚಿ ಅವರು ಹೊರ್ಮುಜ್ ಜಲಸಂಧಿಯು ಸಂಚಾರಕ್ಕೆ ಮುಕ್ತವಾಗಿದೆ ಎಂದು ಹೇಳಿದ್ದರೂ, ತೈಲೋತ್ಪಾದನೆ ಮತ್ತು ಸರಬರಾಜು ಕೂಡಲೇ ಸರಿ ದಾರಿಗೆ ಬರುವ ಸಾಧ್ಯತೆಯಿ‌ಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ.

ಕುವೈತ್ ಮತ್ತು ಇರಾಕ್‌ನಲ್ಲಿ ಕಚ್ಚಾ ತೈಲ ನಿಕ್ಷೇಪಗಳ ಕಾರ್ಯಾಚರಣೆ ಯಥಾಸ್ಥಿತಿಗೆ ಬರಲು ನಾಲ್ಕೈದು ತಿಂಗಳುಗಳೇ ಬೇಕಾಗಬಹುದು. ಬೇಸಿಗೆ ಮುಗಿಯುವವರೆಗೂ ಇಂಧನ ಕೊರತೆ ಮುಂದುವರಿಯಲಿದೆ ಎಂದು ವಿಶ್ಲೇಷಕ ಜಾನ್ನೆಸ್‌ ರೌಬಲ್‌ ಹೇಳಿದ್ದಾರೆ.

ಕತಾರ್‌ನ ತೈಲ ಸಂಸ್ಕರಣಾ ಸಾಮರ್ಥ್ಯಕ್ಕೆ ಆಗಿರುವ ಹಾನಿ ಸರಿಪಡಿಸಿಕೊಳ್ಳಲು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries