ಚಂಡೀಗಢ: 'ರಾಜ್ಯಸಭಾ ಸದಸ್ಯ ವಿಕ್ರಮ್‌ಜಿತ್ ಸಿಂಗ್ ಸಾಹ್ನಿ 'ಆಜಾದ್ ಸಮೂಹ'ಕ್ಕೆ ಸೇರ್ಪಡೆಯಾಗುವಂತೆ ಕರೆದರು. ಆದರೆ, ಅದಕ್ಕೆ ನಾನು ಒಪ್ಪಲಿಲ್ಲ' ಎಂದು ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜ್ಯಸಭಾ ಸದಸ್ಯ ಬಲಬೀರ್ ಸಿಂಗ್ ಸೀಚೆವಾಲ್ ಭಾನುವಾರ ಹೇಳಿದ್ದಾರೆ.
ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ತೊರೆದು, ರಾಜ್ಯಸಭೆಯ ಏಳು ಸದಸ್ಯರು ಅಚ್ಚರಿಯ ರೀತಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ವಿದ್ಯಮಾನದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಲಬೀರ್, 'ಪಕ್ಷಕ್ಕೆ ಅವರೆಲ್ಲ ದ್ರೋಹ ಬಗೆದರು.
ಪಂಜಾಬ್‌ನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿ ಎಂಬ ಉದ್ದೇಶದಿಂದ ಅವರೆಲ್ಲರನ್ನೂ ಮೇಲ್ಮನೆಗೆ ಎಎಪಿ ಆಯ್ಕೆ ಮಾಡಿ ಕಳುಹಿಸಿತ್ತು' ಎಂದಿದ್ದಾರೆ.
'ಏಪ್ರಿಲ್ 24ರಂದು ಸಾಹ್ನಿ ನನಗೆ ಕರೆ ಮಾಡಿದರು. ಪಂಜಾಬ್ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ 'ಆಜಾದ್ ಸಮೂಹ' ರಚಿಸಲಾಗುತ್ತಿದ್ದು, ಈಗಾಗಲೇ ಆರೇಳು ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದರು. ನನ್ನನ್ನೂ ಆ ಸಮೂಹಕ್ಕೆ ಸೇರಿಕೊಳ್ಳುವಂತೆ ಆಹ್ವಾನಿಸಿದರು. ನಾನು ಒಪ್ಪಲಿಲ್ಲ. ಆಮೇಲೆ ನೋಡಿದರೆ ಅವರೆಲ್ಲ ಬಿಜೆಪಿಗೆ ಜಿಗಿದರು' ಎಂದು ಪರಿಸರವಾದಿಯೂ ಆಗಿರುವ ಬಲಬೀರ್ ತಿಳಿಸಿದ್ದಾರೆ.
ಎಎಪಿ ತೊರೆದು, ಬಿಜೆಪಿ ಸೇರಿದ ಏಳು ರಾಜ್ಯಸಭಾ ಸದಸ್ಯರಲ್ಲಿ ಆರು ಮಂದಿ ಪಂಜಾಬ್‌ನವರು.
'ರಾಘವ್ ಚಡ್ಡಾ ಹಾಗೂ ಸಂದೀಪ್ ಪಾಠಕ್ ಪಂಜಾಬ್‌ನಲ್ಲಿ ಅಧಿಕಾರವನ್ನು ಚೆನ್ನಾಗಿಯೇ ಅನುಭವಿಸಿದವರು. ಅವರೆಲ್ಲ ಈಗ ಪಕ್ಷಕ್ಕೇ ದ್ರೋಹ ಬಗೆದರು' ಎಂದು ಬಲಬೀರ್ ಟೀಕಿಸಿದ್ದಾರೆ.

