ಬಾಗ್ದಾದ್: ಅಮೆರಿಕ-ಇರಾನ್ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ಸ್ಥಿತಿ ಸಾಮಾನ್ಯವಾಗುತ್ತಿದ್ದಂತೆ, ಇರಾಕ್ ತನ್ನ ವಾಯುಪ್ರದೇಶವನ್ನು ಮತ್ತೆ ತೆರೆಯುವುದಾಗಿ ಘೋಷಿಸಿದೆ.
ಇರಾಕ್ ನಾಗರಿಕ ವಿಮಾನಯಾನ ಪ್ರಾಧಿಕಾರವು ದೇಶದ ವಾಯುಪ್ರದೇಶ ಹಾಗೂ ಎಲ್ಲಾ ವಿಮಾನ ನಿಲ್ದಾಣಗಳನ್ನು ತಕ್ಷಣದಿಂದಲೇ ಕಾರ್ಯಾಚರಣೆಗೆ ಮುಕ್ತಗೊಳಿಸಿರುವುದಾಗಿ ತಿಳಿಸಿದೆ.
ಇರಾಕಿ ಸುದ್ದಿ ಸಂಸ್ಥೆ(INA)ಗೆ ನೀಡಿದ ಹೇಳಿಕೆಯಲ್ಲಿ, "ಪರಿಸ್ಥಿತಿ ಸ್ಥಿರಗೊಂಡು ಸಾಮಾನ್ಯ ಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ, ಇಂದಿನಿಂದ ವಾಯು ಸಂಚಾರಕ್ಕೆ ಇರಾಕ್ ವಾಯುಪ್ರದೇಶವನ್ನು ಪುನಃ ತೆರೆಯಲು ನಿರ್ಧರಿಸಲಾಗಿದೆ" ಎಂದು ಪ್ರಾಧಿಕಾರ ತಿಳಿಸಿದೆ.
ಈ ಕ್ರಮದಡಿಯಲ್ಲಿ, ನಿಗದಿತ ನಿಯಮಗಳು ಮತ್ತು ಸೂಚನೆಗಳಿಗೆ ಅನುಗುಣವಾಗಿ ಓವರ್ ಫ್ಲೈಟ್ ಗಳು, ಟೇಕ್ ಆಫ್ಗಳು ಮತ್ತು ಲ್ಯಾಂಡಿಂಗ್ ಗಳು ಸೇರಿದಂತೆ ಎಲ್ಲಾ ನಾಗರಿಕ ವಿಮಾನಗಳ ಸಂಚಾರವನ್ನು ಮರುಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.
ವಾಯು ಸಂಚಾರವು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಯುವಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, "ವಾಯು ಸುರಕ್ಷತೆ ಮತ್ತು ಭದ್ರತೆಯ ಅತ್ಯುನ್ನತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಸಂಬಂಧಿತ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರ ಸಮನ್ವಯ ಮುಂದುವರಿಸಲಾಗುವುದು" ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

