ರಾಯಪುರ : ಚತ್ತೀಸ್ ಗಢದ ದಟ್ಟ ಕಾನನ, ಎತ್ತರದ ಬೆಟ್ಟಗಳು ಹಾಗೂ ದುರ್ಗಮ ಪ್ರದೇಶವಾದ ನಾರಾಯಣಪುರ ಜಿಲ್ಲೆಯ ಇರ್ಪಾನಾರ್ ಗ್ರಾಮವು ಇದೇ ಮೊದಲ ಬಾರಿಗೆ ವಿದ್ಯುತ್ ಬೆಳಕನ್ನು ಕಂಡಿದೆ.
ಜಿಲ್ಲಾ ಕೇಂದ್ರವಾದ ನಾರಾಯಣಪುರದಿಂದ 30 ಕಿ.ಮೀ ದೂರದಲ್ಲಿರುವ ಇರ್ಪಾನಾರ್ ಗ್ರಾಮವು ದುರ್ಗಮ ಭೌಗೋಳಿಕ ಪರಿಸ್ಥಿತಿಯನ್ನು ಹೊಂದಿರುವುದರಿಂದ ಅಲ್ಲಿಗೆ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಪರಿಕರಗಳನ್ನು ತರುವುದು ದುಸ್ತರವಾಗಿತ್ತು.
ಹೀಗಾಗಿ ಸ್ಥಳೀಯ ಜನರು ಹಾಗೂ ರಾಜ್ಯ ವಿದ್ಯುತ್ ನಿಗಮ ಸಂಸ್ಥೆಯ ಸಿಬ್ಬಂದಿ ವಿದ್ಯುತ್ ಕಂಬಗಳು ಮತ್ತಿತರ ಸಾಮಗ್ರಿಗಳನ್ನು ಕಚ್ಚಾ ರಸ್ತೆಗಳ ಮೂಲಕ, ಕಡಿದಾದ ಬೆಟ್ಟಗಳು ಮತ್ತು ದಟ್ಟ ಕಾಡುಗಳ ನಡುವೆ ಹೊತ್ತುಕೊಂಡೇ ತರಬೇಕಾಯಿತು.
ದುರ್ಗಮ ಪ್ರದೇಶ ಹಾಗೂ ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ತಂಡವು ವಿದ್ಯುತ್ ಸಂಪರ್ಕ ವಿಸ್ತರಣೆ, ಕಂಬಗಳ ಅಳವಡಿಕೆ ಹಾಗೂ ಸಂಪರ್ಕಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿದೆ ಎಂದು ನಾರಾಯಣಪುರದ ಜಿಲ್ಲಾಧಿಕಾರಿ ನಮ್ರತಾ ಜೈನ್ ತಿಳಿಸಿದ್ದಾರೆ.
ಇರ್ಪಾನಾರ್ ಗ್ರಾಮದ ವಿದ್ಯುದೀಕರಣಕ್ಕೆ ಒಟ್ಟು 56.11 ಲಕ್ಷ ವೆಚ್ಚವಾಗಿದೆ. ಸೂರ್ಯನ ಬೆಳಕು ಹಾಗೂ ಕಟ್ಟಿಗೆಯ ಬೆಂಕಿಯನ್ನು ಅವಲಂಬಿಸಿ ತಲೆತಲಾಂತರಗಳಿಂದ ಬದುಕುತ್ತಿದ್ದ ಇಲ್ಲಿನ ಗ್ರಾಮಸ್ಥರಿಗೆ ವಿದ್ಯುತ್ ಸಂಪರ್ಕ ದೊರೆತಿರುವುದು ತಂತ್ರಜ್ಞಾನದ ಯಶಸ್ಸು ಮಾತ್ರವಲ್ಲದೆ, ಅವರ ಭೌಗೋಳಿಕ ಏಕಾಂಗಿತನದ ಅಂತ್ಯವೂ ಹೌದು ಎಂದು ಮಾಧ್ಯಮಗಳು ಬಣ್ಣಿಸಿವೆ.

