ಚಂಡಿಗಡ : ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಹಾಗೂ ಹಿರಿಯ ಆಪ್ ನಾಯಕ ಭಗವಂತ ಮಾನ್ ಅವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಛಡ್ಡಾ ಶುಕ್ರವಾರ ಇತರ ಆರು ಸಂಸದರೊಂದಿಗೆ ಆಪ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಮೆಂತ್ಯ ಹುಡಿ, ಕೆಂಪು ಮೆಣಸು, ಕರಿ ಮೆಣಸು ಮತ್ತು ಕೊತ್ತುಂಬರಿ ಈ ಏಳು ವಸ್ತುಗಳು ಒಟ್ಟಾಗಿ 'ಸಬ್ಜಿ(ಪಲ್ಯ)'ಯನ್ನು ಹೆಚ್ಚು ರುಚಿಕರವಾಗಿಸುತ್ತವೆ. ಆದರೆ ಅವು ತಾವಾಗಿಯೇ 'ಸಬ್ಜಿ'ಆಗಲು ಸಾಧ್ಯವಿಲ್ಲ ಎಂದು ಛಡ್ಡಾ ಅವರ ಹೆಸರನ್ನು ಉಲ್ಲೇಖಿಸದೆ ಭಗವಂತ ಮಾನ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ವೈಯಕ್ತಿಕವಾಗಿ ನಾಯಕರು ಮುಖ್ಯವಲ್ಲ, ಪಕ್ಷ ಮತ್ತು ಒಗ್ಗಟ್ಟು ಮುಖ್ಯ ಎನ್ನುವುದನ್ನು ಮಾನ್ ಪೋಸ್ಟ್ ಸೂಚಿಸಿದೆ.
ಮಾನ್ ಹೇಳಿಕೆಯು ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಬೆಳೆಯುವ ರೈತರಿಗೆ ಮಾಡಿರುವ 'ಅವಮಾನ'ವಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಮಾನ್ ದಿನವಿಡೀ ಜೋಕ್ ಮಾಡುವುದನ್ನು ಬಿಟ್ಟರೆ ಇನ್ನೇನೂ ಮಾಡುವುದಿಲ್ಲ. ಇದು ಜನರನ್ನು ರಂಜಿಸಬಹುದು, ಆದರೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ತರುವುದಿಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಹೇಳಿದರು.

