ಬಲ್ಲಿಯಾ: ಖಾಸಗಿ ಆಯಂಬುಲೆನ್ಸ್ ಒಂದಕ್ಕೆ ಪೆಟ್ರೋಲ್ ಪಂಪ್ ಇಂಧನ ನಿರಾಕರಿಸಿದ್ದರಿಂದ, 50 ವರ್ಷದ ರೋಗಿಯೊಬ್ಬರನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗದೆ ಅವರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಸಂಬಂಧ ಪೆಟ್ರೋಲ್ ಪಂಪ್ ವ್ಯವಸ್ಥಾಪಕನ ವಿರುದ್ಧ ಶನಿವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತೆಂಗ್ರಾಹಿ ಗ್ರಾಮದಲ್ಲಿನ ಮೆಸರ್ಸ್ ಭೂಷಣ್ ಸರ್ವಿಸ್ ಸ್ಟೇಷನ್ ನ ವ್ಯವಸ್ಥಾಪಕ ಅಶೋಕ್ ಕುಮಾರ್ ಭಾರ್ತಿ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಬರಾಜು ಪರಿವೀಕ್ಷಕ ಇಂದ್ರೇಶ್ ಕುಮಾರ್ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ, ಏಪ್ರಿಲ್ 22ರಂದು ರಾತ್ರಿ ಸುಮಾರು 9.20ರ ವೇಳೆಗೆ ಇಂಧನ ಖಾಲಿಯಾಗಿದ್ದುದರಿಂದ, ಇಂಧನಕ್ಕಾಗಿ ಆಯಂಬುಲೆನ್ಸ್ ಪೆಟ್ರೋಲ್ ಪಂಪ್ ಗೆ ಬಂದಿತ್ತು ಎಂದು ವ್ಯವಸ್ಥಾಪಕ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಇಂಧನ ಲಭ್ಯವಿಲ್ಲವೆಂದು ಹೇಳಿ ಇಂಧನವನ್ನು ನಿರಾಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಯಂಬುಲೆನ್ಸ್ ಸದರಿ ಪೆಟ್ರೋಲ್ ಪಂಪ್ ಬಳಿ ಸುಮಾರು 15 ನಿಮಿಷಗಳ ಕಾಲ ಕಾಯುತ್ತಾ ನಿಂತಿತ್ತು. ಆದರೆ, ಈ ವೇಳೆ 4,595 ಲೀಟರ್ ಮೋಟಾರ್ ಸ್ಪಿರಿಟ್, 4,784 ಲೀಟರ್ ಹೈಸ್ಪೀಡ್ ಡೀಸೆಲ್ ಹಾಗೂ 3,475 ಲೀಟರ್ ಪ್ರೀಮಿಯಂ ಪೆಟ್ರೋಲ್ ಸೇರಿದಂತೆ ಪೆಟ್ರೋಲ್ ಪಂಪ್ ನಲ್ಲಿ ಸಾಕಷ್ಟು ಇಂಧನ ಲಭ್ಯವಿತ್ತು. ಹೀಗಿದ್ದೂ, ಇಂಧನವನ್ನು ನಿರಾಕರಿಸಲಾಗಿದೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಮೇಲ್ವಿಚಾರಣೆಯಲ್ಲಿ ಬೈರಿಯಾ ಉಪವಿಭಾಗ ದಂಡಾಧಿಕಾರಿ ಹಾಗೂ ಜಿಲ್ಲಾ ಸರಬರಾಜು ಅಧಿಕಾರಿಯನ್ನು ಒಳಗೊಂಡ ಸಮಿತಿಯಿಂದ ತನಿಖೆ ನಡೆಸಲಾಗಿದೆ. ಸಮಿತಿ ನೀಡಿದ ವರದಿಯನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಮಂಗ್ಲಾ ಪ್ರಸಾದ್ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದು, ಆರೋಪಿ ವ್ಯವಸ್ಥಾಪಕನನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಬೈರಿಯಾ ವೃತ್ತಾಧಿಕಾರಿ ಮುಹಮ್ಮದ್ ಫಾಹೀಂ ಖುರೇಷಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಎಪ್ರಿಲ್ 22ರ ರಾತ್ರಿ ಬೈರಿಯಾ ತಹಸೀಲಿನ ಪಾಂಡೆಪುರ್ ನಿವಾಸಿ ಛತ್ತು ಶರ್ಮ (50) ಗಂಭೀರವಾಗಿ ಅನಾರೋಗ್ಯಕ್ಕೀಡಾಗಿದ್ದರು. ಅವರ ಕುಟುಂಬದ ಸದಸ್ಯರು ಅವರನ್ನು ಖಾಸಗಿ ಆಯಂಬುಲೆನ್ಸ್ ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ, ಆಯಂಬುಲೆನ್ಸ್ ನ ಇಂಧನ ಖಾಲಿಯಾಗಿತ್ತು ಎಂದು ಜಿಲ್ಲಾ ಸರಬರಾಜು ಅಧಿಕಾರಿ ದೇವಮಣಿ ಮಿಶ್ರಾ ತಿಳಿಸಿದ್ದಾರೆ.
ಇಂಧನಕ್ಕಾಗಿ ತೆಂಗ್ರಾಹಿ ಗ್ರಾಮದ ಬಳಿ ಇರುವ ಪೆಟ್ರೋಲ್ ಪಂಪ್ ಒಂದನ್ನು ಕುಟುಂಬದ ಸದಸ್ಯರು ಸಂಪರ್ಕಿಸಿದ್ದಾರೆ. ಆದರೆ, ಇಂಧನ ಕೊರತೆಯಿದೆ ಎಂದು ಹೇಳಿ ಇಂಧನ ಪೂರೈಸಲು ಪೆಟ್ರೋಲ್ ಪಂಪ್ ಆಪರೇಟರ್ ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇಂಧನ ಕೊರತೆಯಿಂದ ಛತ್ತು ಶರ್ಮರನ್ನು ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೆ ಹೋಗಿದ್ದರಿಂದ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಆಯಂಬುಲೆನ್ಸ್ ಪೆಟ್ರೋಲ್ ಪಂಪ್ ತಲುಪಿ ಇಂಧನಕ್ಕಾಗಿ ಮನವಿ ಮಾಡಿದ್ದರೂ, ಇಂಧನವನ್ನು ಪೂರೈಸದೆ ಇರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ದೃಢಪಟ್ಟಿದೆ. ಪೆಟ್ರೋಲ್ ಪಂಪ್‌ನ ನಿರ್ವಾಹಕ ಕಡಿಮೆ ಸಂಗ್ರಹವಿದೆ ಎಂದು ಹೇಳಿದ್ದಾನೆ. ಆದರೆ, ತಪಾಸಣೆಯ ವೇಳೆ ಪೆಟ್ರೋಲ್ ಪಂಪ್ ನಲ್ಲಿ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹ ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳು ಹೇಳಿದ್ದಾರೆ.
ಇಂಡಿಯನ್ ಆಯಿಲ್ ಪ್ರತಿನಿಧಿಗಳೂ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು ಆಧರಿಸಿ ಪೆಟ್ರೋಲ್ ಪಂಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

