ತಿರುವನಂತಪುರಂ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಕೇರಳ ವಿಧಾನಸಭೆ ಚುನಾವಣೆಗೆ ಮಂಗಳವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ನಿರ್ಗತಿಕ ಮಹಿಳೆಯರು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರ್ಥಿಕ ಸಹಾಯ, ಬಡ ಕುಟುಂಬಗಳಿಗೆ ವರ್ಷಕ್ಕೆ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು, ಕೇರಳಕ್ಕೆ ಏಮ್ಸ್ ಮತ್ತು ರಾಜ್ಯದ ಪೂಜಾ ಸ್ಥಳಗಳ ರಕ್ಷಣೆ ಭರವಸೆ ನೀಡಲಾಗಿದೆ.
ಇಲ್ಲಿ ನಡೆದ ಎನ್‌ಡಿಎ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ರಾಜ್ಯ ರಾಜಧಾನಿಯನ್ನು ಕಣ್ಣೂರಿನೊಂದಿಗೆ ಸಂಪರ್ಕಿಸುವ ಹೈಸ್ಪೀಡ್ ರೈಲು ಜಾಲ, ಪ್ರತಿ ಮನೆಗೆ 20,000 ಲೀಟರ್ ಉಚಿತ ನೀರು ಮತ್ತು ಮುಲ್ಲಪೆರಿಯಾರ್ ಅಣೆಕಟ್ಟಿಗೆ ಸಂಬಂಧಿಸಿದಂತೆ ತಮಿಳುನಾಡಿಗೆ ನೀರು ಮತ್ತು ಕೇರಳಕ್ಕೆ ಸುರಕ್ಷತೆ ಎಂಬ ಭರವಸೆಯೂ ಸೇರಿದೆ.
ಬಡ ಮತ್ತು ಬಿಪಿಎಲ್ ಕುಟುಂಬಗಳ ಪ್ರತಿಯೊಬ್ಬ ಮಹಿಳೆಗೆ ಮಾಸಿಕ ₹2,500 ರೀಚಾರ್ಜ್‌ನೊಂದಿಗೆ ಭಕ್ಷ್ಯ ಆರೋಗ್ಯ ಸುರಕ್ಷಾ ಕಾರ್ಡ್ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಇದನ್ನು ಮಹಿಳೆಯರು ಔಷಧಾಲಯಗಳು ಮತ್ತು ದಿನಸಿ ಅಂಗಡಿಗಳಲ್ಲಿ ಬಳಸಬಹುದು.
ಇದರ ಜೊತೆಗೆ, ಬಡ ಕುಟುಂಬಗಳ ಮಹಿಳಾ ಮುಖ್ಯಸ್ಥೆಗೆ, ವಿಧವೆಯರು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತಿಂಗಳಿಗೆ ₹3,000ಗಳ ಪಿಂಚಣಿ ನೀಡಲಾಗುವುದು. .ಹೆಚ್ಚುವರಿಯಾಗಿ, ಓಣಂ ಮತ್ತು ಕ್ರಿಸ್‌ಮಸ್ ಸಮಯದಲ್ಲಿ ಬಡ ಕುಟುಂಬಗಳಿಗೆ ತಲಾ ಒಂದು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
'ದೇವಸ್ಥಾನ ನಿರ್ವಹಣೆಯಲ್ಲಿ ಭಕ್ತರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ದೇವಸ್ವಂ ಮಂಡಳಿಗಳನ್ನು ನವೀಕರಿಸುವ ಮೂಲಕ ಶಬರಿಮಲೆ, ಗುರುವಾಯೂರು ಮತ್ತು ಇತರ ಎಲ್ಲ ಪೂಜಾ ಸ್ಥಳಗಳನ್ನು ರಕ್ಷಿಸುತ್ತೇವೆ'ಎಂದು ಭರವಸೆ ನೀಡಲಾಗಿದೆ.
ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನದ ಬಗ್ಗೆ ಕಾಲಮಿತಿಯ ಸಿಬಿಐ ತನಿಖೆ ನಡೆಸಿ ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ ಎನ್‌ಡಿಎ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಬೆಟ್ಟದ ತುದಿಯಲ್ಲಿರುವ ದೇವಾಲಯದಲ್ಲಿ ದೊಡ್ಡ ಪ್ರಮಾಣದ ಭಕ್ತರ ಕೇಂದ್ರಿತ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೊಳ್ಳಲು ಶಬರಿಮಲೆ ಮೂಲಸೌಕರ್ಯ ಅಭಿವೃದ್ಧಿ ಮಿಷನ್ ಅನ್ನು ಪ್ರಾರಂಭಿಸುವುದಾಗಿಯೂ ಅದು ಭರವಸೆ ನೀಡಿದೆ.

