ಗ್ಯಾಂಗ್ಟಕ್: ಸಿಕ್ಕಿಂಗೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಗ್ಯಾಂಗ್ಟಕ್ ನಲ್ಲಿ ಯುವಕರೊಂದಿಗೆ ಸೌಹಾರ್ದ ಫುಟ್ ಬಾಲ್ ಪಂದ್ಯವಾಡಿದ್ದು, ಆ ಪಂದ್ಯದ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ತ್ರಿವರ್ಣವನ್ನು ಹೊಂದಿರುವ ನೀಲಿ ಸ್ಪೋರ್ಟ್ಸ್ ಜಾಕೆಟ್ ಧರಿಸಿರುವ ಪ್ರಧಾನಿ ಮೋದಿ, ಅದಕ್ಕೆ ಹೊಂದಾಣಿಕೆಯಾಗುವಂಥ ಕಿಟ್ ಗಳು ಹಾಗೂ ತಲಾ ಒಂದು ಫುಟ್ ಬಾಲ್ ಹಿಡಿದಿರುವ ಯುವ ಫುಟ್ ಬಾಲ್ ಗುಂಪಿನೊಂದಿಗೆ ನಡೆದು ಹೋಗುತ್ತಿರುವುದನ್ನು ಈ ಫೋಟೊದಲ್ಲಿ ನೋಡಬಹುದಾಗಿದೆ.
"ಗ್ಯಾಂಗ್ಟಾಕ್‌ನ ಸುಂದರ ಮುಂಜಾವಿನಲ್ಲಿ ಸಿಕ್ಕಿಂನ ನನ್ನ ಯುವ ಸ್ನೇಹಿತರೊಂದಿಗೆ ಫುಟ್‌ಬಾಲ್ ಆಡುವುದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ" ಎಂದು ಯುವ ಫುಟ್ ಬಾಲ್ ಆಟಗಾರರೊಂದಿಗಿನ ತಮ್ಮ ಸಂವಾದದ ಫೋಟೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮತ್ತೊಂದು ಪೋಸ್ಟ್ ಮಾಡಿರುವ ಅವರು, "ಈ ಯುವಕರೊಂದಿಗಿನ ಫುಟ್ ಬಾಲ್ ಅವಧಿ ನಿಜಕ್ಕೂ ಚೈತನ್ಯದಾಯಕವಾಗಿತ್ತು" ಎಂದು ಪ್ರಶಂಸಿಸಿದ್ದಾರೆ.
ಹಿಮಾಲಯ ತಪ್ಪಲಿನ ರಾಜ್ಯವಾದ ಸಿಕ್ಕಿಂಗೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಧಿಕೃತ ಭೇಟಿ ನೀಡಿದ್ದು, ಈ ನಡುವೆ ಅವರು ಅಲ್ಲಿನ ಯುವ ಫುಟ್ ಬಾಲ್ ಆಟಗಾರರೊಂದಿಗೆ ಕೆಲ ಹೊತ್ತು ಕ್ರೀಡಾ ಕ್ಷಣಗಳನ್ನು ಕಳೆದರು.
ಸಿಕ್ಕಿಂ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದು 50 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಸುಮಾರು 4,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ.

