ನವದೆಹಲಿ: ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳ ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆ ಪರಿಶೀಲನಾ ಶುಲ್ಕವನ್ನು ಪ್ರತಿ ಪತ್ರಿಕೆಗೆ ₹100ಕ್ಕೆ ಇಳಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯ ಪ್ರಕಟಿಸಿದೆ.ಅಲ್ಲದೆ, ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ವ್ಯವಸ್ಥೆ ಅಳವಡಿಸಿರುವುದರಿಂದ ವಿದ್ಯಾರ್ಥಿಗಳ ಅಂಕಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ವಿದ್ಯಾರ್ಥಿಗಳ ಕಳವಳವನ್ನು ಕೂಡ ಸಚಿವಾಲಯ ತಳ್ಳಿಹಾಕಿದೆ.
ಒಎಸ್‌ಎಂ ಎಂದರೆ ಉತ್ತರ ಪತ್ರಿಕೆ ಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಪರದೆಯ ಮೇಲೆ ಡಿಜಿಟಲ್ ರೂಪದಲ್ಲಿ ಮೌಲ್ಯಮಾಪನ ಮಾಡುವ ವಿಧಾನ. ಇದರಲ್ಲಿ ಮೌಲ್ಯಮಾಪಕರು ಕಂಪ್ಯೂಟರ್ ಬಳಸಿ ಅಂಕಗಳನ್ನು ನೀಡುತ್ತಾರೆ.
ಒಎಸ್‌ಎಂ ವ್ಯವಸ್ಥೆಯಿಂದ ಅಂಕಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿದ್ಯಾರ್ಥಿಗಳು ಆತಂಕಪಟ್ಟಿದ್ದರು. ವಿದ್ಯಾರ್ಥಿಗಳ ಆತಂಕವನ್ನು ಕಡಿಮೆ ಮಾಡಲು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆ ಪರಿಶೀಲನಾ ಶುಲ್ಕ ಕಡಿಮೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

