ಅಹ್ಮದಾಬಾದ್: ಮುಂದ್ರಾ ಕರಾವಳಿ ತೀರದಲ್ಲಿ ಭಾರತೀಯ ತಟ ರಕ್ಷಣಾ ಪಡೆ ಮತ್ತು ಎಟಿಎಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸರಕು ಸಾಗಾಟದ ಹಡಗನ್ನು ತಡೆದು 1,150 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದೆ.
ಇದರೊಂದಿಗೆ ಗುಜರಾತ್ ಕರಾವಳಿಯನ್ನು ಗುರಿಯಾಗಿರಿಸಿಕೊಂಡಿದ್ದ ಬೃಹತ್ ಮಾದಕ ದ್ರವ್ಯ ಸಾಗಣೆ ಜಾಲವನ್ನು ಭೇದಿಸಿದಂತಾಗಿದೆ.
ಈ ಕೊಕೇನ್ ಅನ್ನು ಬ್ರೆಝಿಲ್ ನಲ್ಲಿ ಹಡಗಿಗೆ ಹೇರಲಾಗಿತ್ತು. ಹಡಗು ಕಚ್ ತಲುಪುವ ಮುನ್ನ ಹಲವು ಅಂತರರಾಷ್ಟ್ರೀಯ ಜಲಮಾರ್ಗಗಳ ಮೂಲಕ ಹಾದು ಬಂದಿದೆ. ಹಡಗಿನಲ್ಲಿ ತರಲಾದ ಕೊಕೇನ್ ಅನ್ನು ದಿಲ್ಲಿಯಲ್ಲಿರುವ ವಿದೇಶಿ ಪ್ರಜೆಗಳಿಗೆ ತಲುಪಿಸಲು ಯೋಜಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೋರ್ವ ಶಂಕಿತ ಆರೋಪಿ ಸಮುದ್ರಕ್ಕೆ ಹಾರಿ ತಪ್ಪಿಸಿಕೊಂಡಿದ್ದಾನೆ. ಆತನಿಗಾಗಿ ತೀವ್ರ ಶೋಧ ಕಾರ್ಯ ಆರಂಭಗೊಂಡಿದೆ.

