ಕೊಚ್ಚಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಅಟ್ಟಪ್ಪಾಡಿ ಮುಕ್ಕಾಲಿಯ ಬುಡಕಟ್ಟು ಯುವಕ ಮಧು ಮೇಲಿನ ಗುಂಪು ಹಲ್ಲೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ 12 ಮಂದಿ ಅಪರಾಧಿಗಳಿಗೆ ಇಂದು (ಮೇ 25ರಂದು) ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಇದರೊಂದಿಗೆ ಪ್ರತಿಯೊಬ್ಬರಿಗೂ ತಲಾ 2 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
ಮಧು ಅವರ ಕುಟುಂಬದವರು ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಹೈಕೋರ್ಟ್ ಈ ಕಠಿಣ ಆದೇಶ ನೀಡಿದೆ. ವಿಚಾರಣಾ ನ್ಯಾಯಾಲಯವು ಈ ಹಿಂದೆ ಕೈಬಿಟ್ಟಿದ್ದ 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ'ಯಡಿಯ (Sಅ/Sಖಿ ಂಛಿಣ) ಅಪರಾಧಗಳನ್ನು ಹೈಕೋರ್ಟ್ ಪುನಃ ಅಳವಡಿಸಿದೆ. ಈ ಕಾಯ್ದೆಯಡಿ ಅಪರಾಧಗಳು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಜೀವಾವಧಿಗೆ ಹೆಚ್ಚಿಸಲಾಗಿದೆ. ಇದೇ ವೇಳೆ, ಪ್ರಕರಣದ 16ನೇ ಆರೋಪಿ ಮುನೀರ್‌ಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಹಿಂದೆ ವಿಚಾರಣಾ ನ್ಯಾಯಾಲಯವು ಪ್ರಮುಖ ಆರೋಪಿಗಳಿಗೆ ಕೇವಲ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಹಾಗೆಯೇ 16ನೇ ಆರೋಪಿಗೆ ಕೇವಲ ಮೂರು ತಿಂಗಳ ಜೈಲು ಶಿಕ್ಷೆ ನೀಡಲಾಗಿತ್ತು.
►ಪ್ರಥಮ ಆರೋಪಿ ಖುಲಾಸೆ; 12 ಜನರಿಗೆ ಜೀವಾವಧಿ ಶಿಕ್ಷೆ
ಪ್ರಕರಣದಲ್ಲಿ ಮಹತ್ವದ ತಿರುವೆಂಬಂತೆ ಪ್ರಥಮ ಆರೋಪಿ ತಾವಳಂ ಪಾಕ್ಕುಳಂ ಮೇಚ್ಚೇರಿಲ್ ನಿವಾಸಿ ಹುಸೇನ್ ಎಂಬಾತನನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ. ತನ್ನನ್ನು ಗುರುತಿಸಿದ್ದ ಇಬ್ಬರು ಸಾಕ್ಷಿಗಳು ಘಟನಾ ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ಹುಸೇನ್ ನ್ಯಾಯಾಲಯದ ಮುಂದೆ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಸಮಯದಲ್ಲಿ ಆ ಸಾಕ್ಷಿಗಳು ಬೇರೆ ಕಡೆಯಲ್ಲಿದ್ದರು ಎಂಬುದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಡಿಜಿಟಲ್ ದಾಖಲೆಗಳು ಸ್ಪಷ್ಟಪಡಿಸಿವೆ ಎಂದು ಹುಸೇನ್ ಪರ ವಾದಿಸಿದ ವಕೀಲರು ಹೇಳಿದ್ದಾರೆ.
ಆದರೆ, ಉಳಿದ ಅಪರಾಧಿಗಳಾದ ಮರಕ್ಕಾರ್ (2ನೇ ಆರೋಪಿ), ಶಂಸುದ್ದೀನ್ (3ನೇ ಆರೋಪಿ), ರಾಧಾಕೃಷ್ಣನ್ (5ನೇ ಆರೋಪಿ), ಅಬೂಬಕರ್ (6ನೇ ಆರೋಪಿ), ಸಿದ್ದಿಕ್ (7ನೇ ಆರೋಪಿ), ಉಬೈದ್ (8ನೇ ಆರೋಪಿ), ನಜೀಬ್ (9ನೇ ಆರೋಪಿ), ಜೈಜುಮೋನ್ (10ನೇ ಆರೋಪಿ), ಸಜೀವ್ (12ನೇ ಆರೋಪಿ), ಸತೀಶ್ (13ನೇ ಆರೋಪಿ), ಹರೀಶ್ (14ನೇ ಆರೋಪಿ) ಮತ್ತು ಬಿಜು (15ನೇ ಆರೋಪಿ) ಅವರಿಗೆ ಹೈಕೋರ್ಟ್ ಈಗ ಜೀವಾವಧಿ ಶಿಕ್ಷೆ ವಿಧಿಸಿದೆ.
4 ಮತ್ತು 11ನೇ ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಕೆ.ವಿ. ಜಯಕುಮಾರ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.
ಮಣ್ಣಾರ್‌ಕಾಡ್ ವಿಶೇಷ ನ್ಯಾಯಾಲಯವು 2023ರ ಎಪ್ರಿಲ್ 5 ರಂದು ಒಟ್ಟು 16 ಆರೋಪಿಗಳ ಪೈಕಿ 14 ಮಂದಿ ಅಪರಾಧಿಗಳು ಎಂದು ತೀರ್ಪು ನೀಡಿತ್ತು. ಈಗ ಹೈಕೋರ್ಟ್ ಪ್ರಥಮ ಆರೋಪಿಯನ್ನು ಖುಲಾಸೆಗೊಳಿಸಿರುವುದರಿಂದ, ಶಿಕ್ಷೆಗೊಳಗಾದ ಒಟ್ಟು ಅಪರಾಧಿಗಳ ಸಂಖ್ಯೆ 13ಕ್ಕೆ ಇಳಿದಿದೆ. ಇವರಲ್ಲಿ 12 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ಒಬ್ಬನಿಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.
ಏನಿದು ಘಟನೆ?:
2018ರ ಫೆಬ್ರವರಿಯ 22ರ ಮಧ್ಯಾಹ್ನ, ಅಟ್ಟಪ್ಪಾಡಿಯ ಬೆಟ್ಟಗಳ ಅಡಿಯಲ್ಲಿ ಕೃಶಕಾಯದ ಒಬ್ಬ ಬುಡಕಟ್ಟು ಯುವಕ ಜನಸಮೂಹದ ಮಧ್ಯೆ ಒಂಟಿಯಾಗಿ ಬಿಟ್ಟಿದ್ದ. ಬರಿಗಾಲಿನಲ್ಲಿ ನಿಂತು, ಭಯದಿಂದ ತತ್ತರಿಸುತ್ತಿದ್ದ ಆ ಯುವಕನ ಹೆಸರು ಮಧು. ಜನರು ಆತನನ್ನು ಸುತ್ತುವರಿದಾಗ ತನ್ನ ಬಳಿ ಇದ್ದ ಅಲ್ಪಸ್ವಲ್ಪ ವಸ್ತುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಅಟ್ಟಪ್ಪಾಡಿಯ ಮುಕ್ಕಾಲಿಯಲ್ಲಿ ಕಳ್ಳತನದ ಆರೋಪ ಹೊರಿಸಿ, ಒಂದು ಗುಂಪು ಮಾನಸಿಕ ಅಸ್ವಸ್ಥನಾಗಿದ್ದ ಮಧುವಿನ ಕೈ ಕಟ್ಟಿ ಹಾಕಿ ಕ್ರೂರವಾಗಿ ಹಲ್ಲೆ ನಡೆಸಿತ್ತು. ಬಳಿಕ ಆತನನ್ನು ಅಗಳಿ ಪೊಲೀಸರಿಗೆ ಒಪ್ಪಿಸಲಾಯಿತು. ಆದರೆ, ಪೊಲೀಸ್ ಠಾಣೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮಧು ಮೃತಪಟ್ಟಿದ್ದರು. ಮಧು ಮೇಲೆ ನಡೆದ ಗುಂಪು ದಾಳಿಯ ಕ್ರೌರ್ಯ ಮತ್ತು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ರೀತಿ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಬುಡಕಟ್ಟು ಸಮುದಾಯಗಳನ್ನು ನಡೆಸಿಕೊಳ್ಳುವ ವಿಧಾನದ ಬಗ್ಗೆ ದೇಶಾದ್ಯಂತ ಚರ್ಚೆ ಹುಟ್ಟುಹಾಕಿತ್ತು.
2023 ರಲ್ಲಿ, ಮಣ್ಣಾರ್‌ಕಾಡ್ ನಲ್ಲಿರುವ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿಶೇಷ ನ್ಯಾಯಾಲಯವು ಒಟ್ಟು 16 ಆರೋಪಿಗಳ ಪೈಕಿ 14 ಜನರನ್ನು ಅಪರಾಧಿಗಳೆಂದು ಘೋಷಿಸಿತ್ತು. ಅವರ ವಿರುದ್ಧ ನರಹತ್ಯೆ ಸೇರಿದಂತೆ ವಿವಿಧ ಅಪರಾಧಗಳನ್ನು ಹೊರಿಸಿದ ನ್ಯಾಯಾಲಯ ತಲಾ 1 ಲಕ್ಷ ರೂಪಾಯಿ ದಂಡ ಮತ್ತು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಶಿಕ್ಷೆಗೊಳಗಾದ ಈ ವ್ಯಕ್ತಿಗಳು ನಂತರ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೇ ವೇಳೆ, ಆರೋಪಿಗಳ ವಿರುದ್ಧ ಮತ್ತಷ್ಟು ಸೆಕ್ಷನ್‌ಗಳ ಅಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೋರಿ ರಾಜ್ಯ ಸರ್ಕಾರವೂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಅಟ್ಟಪ್ಪಾಡಿಯನ್ನು ನಡುಗಿಸಿದ ಸಾವು:
2017 ಮತ್ತು 2018 ರ ಅವಧಿಯಲ್ಲಿ, ಮುಕ್ಕಾಲಿ ಮತ್ತು ಚಿಂದಕ್ಕಿಯ ಬುಡಕಟ್ಟು ಹಳ್ಳಿಗಳಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ಕಳ್ಳತನಗಳು ಅಲ್ಲಿನ ನಿವಾಸಿಗಳನ್ನು ಕಂಗಾಲು ಮಾಡಿದ್ದವು. ಅಂಗಡಿಗಳು ಮತ್ತು ಮನೆಗಳಿಂದ ಅಕ್ಕಿ, ಮಸಾಲೆ ಪದಾರ್ಥಗಳು, ಬೇಯಿಸಿದ ಆಹಾರ, ಬೀಡಿ, ಸಿಗರೇಟುಗಳು, ಟಾರ್ಚ್‌ಗಳು ಮತ್ತು ಬ್ಯಾಟರಿಗಳು ನಾಪತ್ತೆಯಾಗುತ್ತಿದ್ದವು.
ನಷ್ಟವೇನೋ ಚಿಕ್ಕದಾಗಿತ್ತು, ಆದರೆ ಆ ಪ್ರದೇಶದಲ್ಲಿ ಭಯ ಮತ್ತು ಅನುಮಾನದ ವಾತಾವರಣ ಹರಡಿತ್ತು.
ಈ ಕಳ್ಳತನಗಳ ಹಿಂದೆ ಚಿಂದಕ್ಕಿ ಊರಿನ ಮುಡುಕ ಸಮುದಾಯದ 30 ವರ್ಷದ ಬುಡಕಟ್ಟು ಯುವಕ ಮಧು ಇದ್ದಾನೆ ಎಂದು ಗ್ರಾಮಸ್ಥರು ನಂಬಿದ್ದರು. ಸಣ್ಣ ಪ್ರಮಾಣದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಧು, ಅಗಳಿ ಮತ್ತು ಮುಕ್ಕಾಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದನು. ಆತ ಅನುಮತಿಯಿಲ್ಲದೆ ಹತ್ತಿರದ ಅಂಗಡಿಗಳಿಂದ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ಸ್ಥಳೀಯರಿಗೆ ಆರೋಪಿಸಿದ್ದರು.
2018 ಫೆಬ್ರವರಿ 22 ರಂದು, ಮುಕ್ಕಾಲಿ ಪ್ರದೇಶದ ಪುರುಷರ ಗುಂಪೊಂದು ಆತನನ್ನು ಹಿಡಿಯಲು ನಿರ್ಧರಿಸಿತು.
ಮಧು ಆಂಡಿಯಾಲ್ಲಚಾಲ್ ಸಂರಕ್ಷಿತ ಅರಣ್ಯದ ಒಳಗಿದ್ದಾನೆ ಎಂಬ ಮಾಹಿತಿಯ ಮೇರೆಗೆ, ಅವರು ಆತನನ್ನು ಹುಡುಕುತ್ತಾ ಕಾಡಿನೊಳಗೆ ಪ್ರವೇಶಿಸಿದರು. ಕೊನೆಗೆ ಆತನನ್ನು ಪತ್ತೆಹಚ್ಚಿ, ಕಟ್ಟಿಹಾಕಿ ಮುಕ್ಕಾಲಿಗೆ ಕರೆತಂದರು. ಮಧುನನ್ನು ಹಳ್ಳಿಗೆ ಕರೆತಂದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಸುಮಾರು ಅರ್ಧ ಗಂಟೆಯ ನಂತರ, ಪೊಲೀಸ್ ಜೀಪ್ ಅಗಳಿ ಕಡೆಗೆ ಚಲಿಸುತ್ತಿದ್ದಾಗ, ವಾಹನದ ಹಿಂದಿನ ಸೀಟಲ್ಲಿ ಕುಳಿತಿದ್ದ ಮಧು ಮೇಲೇ ತಾವಳಂ ಎಂಬಲ್ಲಿ ವಾಂತಿ ಮಾಡಿಕೊಂಡಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸಂಜೆ 4.15 ರ ಸುಮಾರಿಗೆ ಅಗಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಫೆಬ್ರವರಿ 24 ರಂದು ತೃಶೂರ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ನಂತರ ಈ ಪ್ರಕರಣವು ಗಂಭೀರ ತಿರುವು ಪಡೆದುಕೊಂಡಿತು.
ವೈದ್ಯಕೀಯ ವರದಿಯು ಅದು ಸಹಜ ಸಾವು ಎಂಬುದನ್ನು ತಳ್ಳಿಹಾಕಿತು. ಅದೊಂದು ವ್ಯವಸ್ಥಿತ ಕೊಲೆ ಎಂದು ವೈದ್ಯರು ತೀರ್ಮಾನಿಸಿದರು. ಮಧು ದೇಹದ ಮೇಲಾದ ತೀವ್ರವಾದ ಪೆಟ್ಟುಗಳಿಂದಾಗಿ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ. ದೇಹದ ಮೇಲಿದ್ದ 15ರಷ್ಟು ಗಾಯಗಳೇ ಆತನ ಸಾವಿಗೆ ಪ್ರಮುಖ ಕಾರಣ ಎಂದು ವರದಿ ಹೇಳಿತ್ತು.
ಕಾಡಿನಿಂದ ಎಳೆದು ತಂದು, ಹಲ್ಲೆ ನಡೆಸಿದ ಮೇಲೆ ಮೆರವಣಿಗೆ ಮಾಡಿದ್ದರು:
ಮಧು ಗುಂಪು ಹಲ್ಲೆ ಪ್ರಕರಣದ ಪ್ರಾಸಿಕ್ಯೂಷನ್ ನ್ಯಾಯಾಲಯದ ಮುಂದೆ ಮಂಡಿಸಿರುವ ವರದಿ ಪ್ರಕಾರ, ಅಜ್ಮುಡಿ ಬೆಟ್ಟದ ಆಳದ ಕಾಡಿನಿಂದ ಆರಂಭವಾದ ಕ್ರೌರ್ಯ, ಅಂತಿಮವಾಗಿ ಒಬ್ಬ ಬುಡಕಟ್ಟು ಯುವಕನನ್ನು ಸಾರ್ವಜನಿಕವಾಗಿ ಅವಮಾನಿಸಿ, ಮನಬಂದಂತೆ ಥಳಿಸಿ, ಸಾವಿಗೆ ನೂಕಿತ್ತು.
ಪ್ರಾಸಿಕ್ಯೂಷನ್ ವಿವರಣೆಯ ಪ್ರಕಾರ, ಈ ಘಟನೆಗಳ ಸರಣಿ ಆರಂಭವಾಗಿದ್ದು 2018ರ ಫೆಬ್ರವರಿ 22ರ ಮಧ್ಯಾಹ್ನ ಸುಮಾರು 12.15ಕ್ಕೆ. ಕಾಡಿನ ಒಳಗಿನ ವಂಡಿಕ್ಕಡವು ತೇಗದ ತೋಟದ ಬಳಿ ಎರಡನೇ ಆರೋಪಿ ಮರಕ್ಕಾರ್ ಎಂಬಾತ ಮೊದಲಿಗೆ ಮಧುನನ್ನು ನೋಡಿದ್ದ. ಈತ ತಕ್ಷಣ ಒಂಬತ್ತನೇ ಆರೋಪಿ ಉಬೈದ್‌ಗೆ ಮಾಹಿತಿ ನೀಡಿದ, ಉಬೈದ್ ಅದನ್ನು ಮೂರನೇ ಆರೋಪಿ ಶಂಸುದ್ದೀನ್‌ಗೆ ತಲುಪಿಸಿದ. ಹೀಗೆ ಈ ಸಂದೇಶ ಉಳಿದ ಆರೋಪಿಗಳಿಗೂ ಕಾಡ್ಗಿಚ್ಚಿನಂತೆ ಹರಡಿತು.
ಮಧ್ಯಾಹ್ನ 12.30ರ ಸುಮಾರಿಗೆ, ಒಂಬತ್ತನೇ ಆರೋಪಿಯ ಅಂಗಡಿಯ ಬಳಿ ಹಲವಾರು ಆರೋಪಿಗಳು ಜಮಾಯಿಸಿದರು. ಮಧುನನ್ನು ಪತ್ತೆಹಚ್ಚಿ, ಕಾಡಿನಿಂದ ಅಪಹರಿಸಿ, ಆತನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸುವ ಉದ್ದೇಶದಿಂದಲೇ ಇವರೆಲ್ಲರೂ ಅಲ್ಲಿ ಸೇರಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿದೆ. ಕೆಲವರು ಆಟೋರಿಕ್ಷಾದಲ್ಲಿ ಬಂದರೆ, ಇನ್ನೊಬ್ಬ ಆರೋಪಿ ಮೋಟಾರ್ ಸೈಕಲ್‌ನಲ್ಲಿ ಬಂದಿದ್ದ. ನಂತರ ಈ ಗುಂಪು ಒಂಬತ್ತನೇ ಆರೋಪಿಗೆ ಸೇರಿದ ಜೀಪ್‌ನಲ್ಲಿ ವಂಡಿಕ್ಕಡವು ತೇಗದ ತೋಟಕ್ಕೆ ತಲುಪಿತು. ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ, ಮರಕ್ಕಾರ್‌ನೊಂದಿಗೆ ಸಂರಕ್ಷಿತ ಅರಣ್ಯವನ್ನು ಪ್ರವೇಶಿಸಿದರು. ಭವಾನಿ ನದಿಯ ಸಮೀಪವಿರುವ ಕಾಡಿನ ದುರ್ಗಮ ಹಾದಿಯಲ್ಲಿ ಮಧುನನ್ನು ಹುಡುಕುತ್ತಾ ಸುಮಾರು 2 ಕಿಲೋಮೀಟರ್ ಒಳಗೆ ನಡೆದರು. ಮಧ್ಯಾಹ್ನ 1.10ರ ಸುಮಾರಿಗೆ 'ಆಂಡಿಯಾಲ್ಲಚಾಲ್' ಎಂಬ ಕಲ್ಲುಬಂಡೆಗಳಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ಮಧು ಈ ಗುಂಪಿಗೆ ಸಿಕ್ಕಿಬಿದ್ದಿದ್ದ.
ಕಾಡಿನೊಳಗೆ ನಡೆದ ಕ್ರೌರ್ಯ ಸೋಷಿಯಲ್ ಮೀಡಿಯಾದಲ್ಲಿ ಲೈವ್:
ಆರೋಪಪಟ್ಟಿಯ ಪ್ರಕಾರ, ಅಲ್ಲಿಂದ ಮುಂದೆ ನಡೆದದ್ದು ಅಕ್ಷರಶಃ ಪೈಶಾಚಿಕ ಕೃತ್ಯ. ಮಧುವನ್ನು ಸುತ್ತುವರಿದ ಗುಂಪು, ಆತನ ಬಟ್ಟೆಗಳನ್ನು ಬಿಚ್ಚಿ, ಆತನೇ ಉಟ್ಟಿದ್ದ ಲುಂಗಿಯಿಂದ ಆತನ ಕೈಗಳನ್ನು ಕಟ್ಟಿಹಾಕಿತು. ಆತನ ಮುಖ ಮತ್ತು ಬೆನ್ನಿನ ಭಾಗಕ್ಕೆ ಮನಬಂದಂತೆ ಗುದ್ದಿ, ಒದೆಯಲಾಯಿತು.
ಅಷ್ಟೇ ಅಲ್ಲ, ನೆರೆದಿದ್ದ ಆರೋಪಿಗಳ ಪೈಕಿ ಕೆಲವರು ಈ ಭೀಕರ ಹಲ್ಲೆಯ ದೃಶ್ಯಗಳನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿಕೊಂಡರು. ಇಡೀ ಸಮಾಜದ ಮುಂದೆ ಆತನನ್ನು ಅಪಹಾಸ್ಯ ಮಾಡುವ ಮತ್ತು ಅವಮಾನಿಸುವ ಕ್ರೂರ ಉದ್ದೇಶದಿಂದ ಒಬ್ಬ ಆರೋಪಿ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಮಧು ಅಲ್ಲಿಂದ ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಮತ್ತೊಬ್ಬ ಆರೋಪಿ ಬ್ಯಾಗ್‌ನ ಜಿಪ್ ಸ್ಟ್ರಾಪ್ ಬಳಸಿ ಮಧು ಕೈಗಳನ್ನು ಬಿಗಿದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಕ್ಕಿ ಮತ್ತು ಇತರ ಸಾಮಗ್ರಿಗಳನ್ನು ಒಳಗೊಂಡಿದ್ದ ಚೀಲವನ್ನು ಮಧುನ ಹೆಗಲ ಮೇಲೆ ಇಟ್ಟು, ಆತನನ್ನು "ಕಳ್ಳ" ಎಂದು ನಿಂದಿಸುತ್ತಾ, ಆಕ್ರೋಶ ಹೊರಹಾಕುತ್ತಾ ಹಲ್ಲೆಯನ್ನು ಮುಂದುವರಿಸಲಾಗಿತ್ತು. ಈ ವೇಳೆ ಮಧುಗೆ ಮರದ ಕೋಲಿನಿಂದಲೂ ಹೊಡೆಯಲಾಗಿತ್ತು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ಬಳಿಕ, ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಮಧುನನ್ನು ಕಾಡಿನಿಂದ ಮುಕ್ಕಾಲಿ ಜಂಕ್ಷನ್‌ವರೆಗೆ ಸುಮಾರು 3 ಕಿಲೋಮೀಟರ್ ನಡೆದುಕೊಂಡು ಬರುವಂತೆ ಈ ಗುಂಪು ಮಾಡಿತ್ತು. ಇತರರ ಮುಂದೆ ಆತನನ್ನು ಹೀನಾಯವಾಗಿ ಅವಮಾನಿಸುವ ಉದ್ದೇಶದಿಂದಲೇ ಈ ಸಾರ್ವಜನಿಕ ಮೆರವಣಿಗೆಯನ್ನು ನಡೆಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಪ್ರಥಮ ಆರೋಪಿ ಹುಸೇನ್ ಆಮೇಲೆ ಸ್ಥಳಕ್ಕೆ ಬಂದಿದ್ದ ಎನ್ನಲಾಗಿದೆ. ಮಧು ಅಲ್ಲಿನ ಅಂಗಡಿಯೊಂದರ ಬಳಿ ಪೆಟ್ಟಿಗೆಯೊಂದಕ್ಕೆ ಒರಗಿ ಕುಳಿತಿದ್ದಾಗ, ಹುಸೇನ್ ಆತನ ಎದೆಗೆ ಬಲವಾಗಿ ಒದೆದಿದ್ದ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಈ ಒದೆತದ ತೀವ್ರತೆಗೆ ಮಧುನ ತಲೆ ಪೆಟ್ಟಿಗೆಗೆ ಬಲವಾಗಿ ಅಪ್ಪಳಿಸಿ, ಆತನಿಗೆ ಗಂಭೀರ ಆಂತರಿಕ ಗಾಯಗಳಾಗಿದ್ದವು.
ಆರೋಪಿಗಳು ಮೇಲ್ಜಾತಿಯ ಸಮುದಾಯಗಳಿಗೆ ಸೇರಿದವರಾಗಿದ್ದು, ಮಧು ಪರಿಶಿಷ್ಟ ಪಂಗಡಕ್ಕೆ (Sಖಿ) ಸೇರಿದವನೆಂದು ತಿಳಿದೇ ಆತನನ್ನು ಗುರಿಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳನ್ನೂ ಪ್ರಕರಣದಲ್ಲಿ ಅಳವಡಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 16 ಮಂದಿಯನ್ನು ಬಂಧಿಸಲಾಗಿತ್ತು.
ಮಣ್ಣಾರ್‌ಕಾಡ್ ಕೋರ್ಟ್ ತೀರ್ಪು: 14 ಮಂದಿಗೆ 7 ವರ್ಷ ಜೈಲು:
ಈ ಘಟನೆ ನಡೆದ ಸುಮಾರು ಐದು ವರ್ಷಗಳ ನಂತರ ಮಣ್ಣಾರ್‌ಕಾಡ್ ನ ಎಸ್‌ಸಿ/ಎಸ್‌ಟಿ (ಪಿಒಎ) ಕಾಯ್ದೆಯ ವಿಶೇಷ ನ್ಯಾಯಾಲಯವು 16 ಆರೋಪಿಗಳ ಪೈಕಿ 14 ಜನರನ್ನು ಅಪರಾಧಿಗಳೆಂದು ಘೋಷಿಸಿ, ಮೂರು ತಿಂಗಳಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿತ್ತು. ಮಣ್ಣಾರ್ ಕಾಡ್ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರತೀಶ್ ಕುಮಾರ್ ಅವರು 2023ರ ಎಪ್ರಿಲ್ 4 ರಂದು ಈ ತೀರ್ಪು ನೀಡಿದ್ದರು. ಇಬ್ಬರು ಆರೋಪಿಗಳ ವಿರುದ್ಧ ಪೂರಕ ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿತ್ತು.
ನ್ಯಾಯಾಲಯವು ಪ್ರಥಮ ಆರೋಪಿಯನ್ನು ಐಪಿಸಿ ಸೆಕ್ಷನ್ 143, 147, 323, 342 ಮತ್ತು 304 ಭಾಗ II ರ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿತ್ತು. ಕೊಲೆಗೆ ಸಮಾನವಲ್ಲದ ಅಪರಾಧಯುತ ನರಹತ್ಯೆಗಾಗಿ ಆತನಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಕಾನೂನುಬಾಹಿರ ಗುಂಪು ಸೇರುವಿಕೆ, ಗಲಭೆ, ಅಕ್ರಮ ಬಂಧನ ಮತ್ತು ಗಾಯ ಉಂಟುಮಾಡಿದ ಆರೋಪಗಳಿಗಾಗಿ ಹೆಚ್ಚುವರಿ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗಿತ್ತು.
ಆರೋಪಿಗಳಾದ 2, 3, 5 ರಿಂದ 10 ಮತ್ತು 12 ರಿಂದ 15 ರವರೆಗಿನವರನ್ನು ಐಪಿಸಿ ಸೆಕ್ಷನ್ 304 ಭಾಗ II ರ ಅಡಿಯಲ್ಲಿ ತಲಾ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡಕ್ಕೆ ಗುರಿಪಡಿಸಲಾಗಿತ್ತು. ಇದರೊಂದಿಗೆ ತೀವ್ರವಾಗಿ ಗಾಯಗೊಳಿಸಿದ್ದಕ್ಕಾಗಿ (ಸೆಕ್ಷನ್ 326) ಏಳು ವರ್ಷ, ಅಪಹರಣಕ್ಕಾಗಿ (ಸೆಕ್ಷನ್ 367) ಐದು ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ 1 ರಿಂದ 3 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲ ಚಾಲ್ತಿಯಲ್ಲಿರುತ್ತವೆ ಎಂದು ಆದೇಶಿಸಲಾಗಿತ್ತು.
ಪ್ರಕರಣದ 16ನೇ ಆರೋಪಿಯನ್ನು ಕೇವಲ ಹಲ್ಲೆ ನಡೆಸಿದ ಅಪರಾಧಕ್ಕಾಗಿ ಐಪಿಸಿ ಸೆಕ್ಷನ್ 352ರ ಅಡಿಯಲ್ಲಿ ಮಾತ್ರ ದೋಷಿ ಎಂದು ಘೋಷಿಸಲಾಗಿತ್ತು. ಆತನಿಗೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 500 ರೂಪಾಯಿ ದಂಡ ವಿಧಿಸಲಾಗಿತ್ತು. ಉಳಿದ ಎಲ್ಲಾ ಆರೋಪಗಳಿಂದ ನ್ಯಾಯಾಲಯ ಆತನನ್ನು ಮುಕ್ತಗೊಳಿಸಿತ್ತು. 4 ಮತ್ತು 11ನೇ ಆರೋಪಿಗಳ ಮೇಲಿನ ಅಪರಾಧಗಳು ಸಾಬೀತಾಗದ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 235(1)ರ ಅಡಿಯಲ್ಲಿ ಅವರನ್ನು ಖುಲಾಸೆಗೊಳಿಸಲಾಗಿತ್ತು.
ಎಲ್ಲಾ ಪ್ರಮುಖ ಜೈಲು ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರುತ್ತವೆ ಎಂದು ತೀರ್ಪಿನಲ್ಲಿ ತಿಳಿಸಲಾಗಿತ್ತು. ವಿಚಾರಣಾ ನ್ಯಾಯಾಲಯವು 2023ರ ಏಪ್ರಿಲ್ 5 ರಂದು ಒಟ್ಟು 16 ಆರೋಪಿಗಳ ಪೈಕಿ 14 ಮಂದಿ ಅಪರಾಧಿಗಳು ಎಂದು ತೀರ್ಪು ನೀಡಿತ್ತು.
ವಿಚಾರಣಾ ನ್ಯಾಯಾಲಯದ ತೀರ್ಪಿನಿಂದ ರಕ್ಷಣೆ ಕೋರಿ ಅಪರಾಧಿಗಳು ಹೈಕೋರ್ಟ್ ಕದ ತಟ್ಟಿದ್ದರೆ, ಇತ್ತ ರಾಜ್ಯ ಸರ್ಕಾರವು ಅಪರಾಧಿಗಳಿಗೆ ಮತ್ತಷ್ಟು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

