ನವದೆಹಲಿ: ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷಗಳು ಅಡ್ಡಿಪಡಿಸುತ್ತಿವೆ ಎಂದು ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳು ಆರೋಪಿದ್ದಾರೆ. ಆದರೆ ಎಲ್ಲವೂ ಸರಿಯಾಗಿದೆ ಎಂದು ಮಂಡಳಿ ಹೇಳಿದ್ದು, ಕೆಲವೊಂದು ಲಾಗಿನ್ ಸಮಸ್ಯೆ ಮಾತ್ರ ವರದಿಯಾಗಿದೆ ಎಂದಿದೆ.
ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ವೆಬ್‌ಸೈಟ್ ಕ್ರಾಶ್ ಆಗಿದೆ, ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ, ಅರ್ಜಿ ಸಲ್ಲಿಸಲೂ ಆಗುತ್ತಿಲ್ಲ ಎಂದು ಹಲವು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ.
'ಲಾಗಿನ್ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಂದ ಬೆಳಿಗ್ಗೆ ಕೆಲವು ಫೋನ್ ಕರೆಗಳು ಬಂದಿವೆ. ಬಳಿಕ ಯಾವುದೇ ದೂರುಗಳು ವರದಿಯಾಗಿಲ್ಲ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದ್ದಾರೆ.
'ಸಮಸ್ಯೆಯ ಬಗ್ಗೆ ದೂರು ಬಂದ ಕಂಪ್ಯೂಟರ್ ರೀಸ್ಟಾರ್ಟ್ ಮಾಡಲು ಹೇಳಿದೆ. ತಾತ್ಕಾಲಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸುವಂತೆಯೂ ತಿಳಿಸಿದೆ. ಆ ಬಳಿಕ ಯಾವುದೇ ಕರೆ ಬಂದಿದೆ. ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ, ಸ್ವಲ್ಪ ಸಮಯ ಕಾದು ಪ್ರಯತ್ನಿಸಬೇಕು' ಎಂದು ಅವರು ತಿಳಿಸಿದ್ದಾರೆ.
'ತಂತ್ರಾಶ ಸರಿಯಾಗಿಯೇ ಕೆಲಸ ಮಾಡುತ್ತಿದೆ. ನಾನೇ ಒಬ್ಬ ಡಮ್ಮಿ ಅಭ್ಯರ್ಥಿಯಾಗಿ ಅರ್ಜಿಯನ್ನು ಸಲ್ಲಿಸಿದೆ. ಅದು ಯಶಸ್ವಿಯಾಗಿ ಸಲ್ಲಿಕೆಯಾಯಿತು' ಎಂದು ಭಾರದ್ವಾಜ್ ಹೇಳಿದರು.
ದೊಡ್ಡ ಮಟ್ಟದ ತಾಂತ್ರಿಕ ದೋಷ ಉಂಟಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ ಎಂದಿದ್ದಕ್ಕೆ, ಇದಕ್ಕೆ ದುರ್ಬಲ ಇಂಟರ್‌ನೆಟ್ ಸಂಪರ್ಕ ಕಾರಣವಿರಬಹುದು ಎಂದು ಹೇಳಿದ್ದಾರೆ.
ಕ್ಯಾಪ್ಚಾ ಸರಿಯಾಗಿ ಕಾಣಿಸುತ್ತಿಲ್ಲ ಎಂದು ಕೆಲವು ದೂರುಗಳು ಬಂದಿವೆ, ಈಗ ಅದನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಟ್ರಾಫಿಕ್‌ನಿಂದಾಗಿ ಪೋರ್ಟಲ್ ನಿಧಾನವಾಗಿದೆಯೇ ಎಂದು ಕೇಳಿದಾಗ, ಇಲ್ಲ ಎಂದು ಹೇಳಿದ್ದಾರೆ.

