ನವದೆಹಲಿ: 'ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬಹುದು' ಎಂಬ ಅಂಶ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ದಾಖಲಾದ ಪ್ರಕರಣಗಳಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಜಮ್ಮು-ಕಾಶ್ಮೀರದಲ್ಲಿ ಮಾದಕವಸ್ತು ಪೂರೈಕೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ಗಡಿಯಾಚೆಗಿನ ಜಾಲದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಹಂದ್ವಾಡದ ನಿವಾಸಿ ಸೈಯದ್ ಇಫ್ತಿಕರ್ ಅಂದ್ರಾಬಿಯ ಜಾಮೀನು ಅರ್ಜಿಯ ವಿಚಾರಣೆ ಕಾಲಕ್ಕೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಂದ್ರಾಬಿಗೆ ಜಾಮೀನು ಮಂಜೂರನ್ನೂ ಮಾಡಿದೆ.
ಆರೋಪಿಯು ತನ್ನ ಪಾಸ್‌ಪೋರ್ಟ್ ಅನ್ನು ಪೊಲೀಸರಿಗೆ ಒಪ್ಪಿಸುವಂತೆ ಮತ್ತು 15 ದಿನಗಳಿಗೊಮ್ಮೆ ಸ್ಥಳೀಯ ಠಾಣೆಗೆ ಹಾಜರಾಗುವಂತೆ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಆದೇಶಿಸಿದೆ.
'ಯುಎಪಿಎಯಲ್ಲಿನ 43ಡಿ(5) ಸೆಕ್ಷನ್ ಅನಿರ್ದಿಷ್ಟಾವಧಿ ಜೈಲುಶಿಕ್ಷೆಯನ್ನು ಸಮರ್ಥಿಸುವುದಿಲ್ಲ ಮತ್ತು ಅದು ಸಂವಿಧಾನದ 21 ಮತ್ತು 22ನೇ ವಿಧಿಯ ಅಡಿ ಕಾರ್ಯನಿರ್ವಹಿಸಬೇಕು. ಈ ಸೆಕ್ಷನ್‌ಗಳು ಕಠಿಣ ಜಾಮೀನು ಷರತ್ತುಗಳನ್ನು ವಿವರಿಸುತ್ತವೆ' ಎಂದು ನ್ಯಾಯಪೀಠ ಹೇಳಿದೆ.
'ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬಹುದು' ಎಂಬುದು 21ನೇ ಮತ್ತು 22ನೇ ವಿಧಿಗೆ ಸಂಬಂಧಿಸಿದ ಸಾಂವಿಧಾನಿಕ ತತ್ವವಾಗಿದೆ ಮತ್ತು ಅಪರಾಧ ಸಾಬೀತಾಗುವವರೆಗೆ ಆರೋಪಿಯನ್ನು ಶಿಕ್ಷೆಗೆ ಒಳಪಡಿಸದಿರುವುದು ಕಾನೂನಿನ ಅಡಿಯಲ್ಲಿರುವ ನಾಗರಿಕ ಸಮಾಜದ ಮೂಲಾಧಾರವಾಗಿರುತ್ತದೆ' ಎಂದು ನ್ಯಾಯಪೀಠ ಹೇಳಿದೆ.
'ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬಹುದು ಎಂಬುದು ಯುಎಪಿಎಗೂ ಅನ್ವಯವಾಗುತ್ತದೆ. ಇದರಲ್ಲಿ ನಮಗೆ ಯಾವುದೇ ಸಂಶಯವಿಲ್ಲ. ನಿರ್ದಿಷ್ಟ ಪ್ರಕರಣಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಜಾಮೀನು ನಿರಾಕರಿಸಬಹುದು' ಎಂದು ಪೀಠ ತಿಳಿಸಿದೆ.
ಯುಎಪಿಎ ಮತ್ತು ಐಪಿಸಿ ಅಡಿ 2020ರಲ್ಲಿ ಈ ಸಂಬಂಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐ) ನಡೆಸುತ್ತಿದೆ.
ಭಯೋತ್ಪಾದಕರ ಜೊತೆ ಸಂಪರ್ಕದಲ್ಲಿ ಇದ್ದುದು ಮೊಬೈಲ್ ಫೋನ್ ದಾಖಲೆಗಳ ಪರಿಶೀಲನೆಯಲ್ಲಿ ಪತ್ತೆಯಾಗಿದೆ ಎಂಬ ಕಾರಣಕ್ಕೆ ತನ್ನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಜಮ್ಮು-ಕಾಶ್ಮೀರದ ಮತ್ತು ಲಡಾಖ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅಂದ್ರಾಬಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಯುಎಪಿಎ ಅಡಿಗೆ ಪ್ರಕರಣದಲ್ಲಿ ಜಾಮೀನು ನೀಡುವ ಕುರಿತು ಕೆ.ಎ ನಜೀಬ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ 2021ರಲ್ಲಿ ಮಹತ್ವದ ತೀರ್ಪು ನೀಡಿತ್ತು. ಇದನ್ನು ವಿಚಾರಣಾ ನ್ಯಾಯಾಲಯಗಳು, ಹೈಕೋರ್ಟ್ ಮತ್ತು ತನ್ನದೇ ಪೀಠಗಳು ತಳ್ಳಿಹಾಕುವಂತಿಲ್ಲ ಎಂದು ಹೇಳಿತ್ತು.
ಉಮರ್ ಖಾಲಿದ್ ಜಾಮೀನು ನಿರಾಕರಣೆಗೆ ಅಸಮಾಧಾನ
'ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬಹುದು' ಎಂಬುದು ಕೇವಲ ಶಾಸನಬದ್ಧ ಘೋಷಣೆಯಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ದೆಹಲಿ ಗಲಭೆ ಪ್ರಕರಣದಲ್ಲಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ಗೆ ಜಾಮೀನು ನೀಡಲು ನಿರಾಕರಿಸಿರುವ ಮತ್ತೊಂದು ಪೀಠದ ತೀರ್ಪನ್ನು ಪ್ರಶ್ನಿಸಿತು. 'ಕೆ.ಎ ನಜೀಬ್ ಪ್ರಕರಣದ ತೀರ್ಪಿನ ಪಾಲನೆ ಸರಿಯಾಗಿ ಆಗಿಲ್ಲ' ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಖಾಲಿದ್ ಮತ್ತು ಶರ್ಜೀಲ್‌ಗೆ ಜಾಮೀನು ನೀಡಲು ಜನವರಿ 5ರಂದು ನಿರಾಕರಿಸಿದ್ದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಎನ್.ವಿ ಅಂಜಾರಿಯ ಅವರ ಪೀಠವು 'ಆರೋಪಿಗಳು ಒಂದು ವರ್ಷದ ಬಳಿಕವಷ್ಟೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು' ಎಂದು ಹೇಳಿತ್ತು. ಈ ಆದೇಶದ ಹಲವು ಅಂಶಗಳನ್ನು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಟೀಕಿಸಿದರು.
ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಶಿಕ್ಷೆ ವಿಧಿಸಿರುವ ಪ್ರಮಾಣ ತುಂಬಾ ಕಡಿಮೆಯಿದೆ. ಶೇ 90ಕ್ಕೂ ಹೆಚ್ಚು ಪ್ರಕರಣಗಳು ಆರೋಪಿಗಳ ಖುಲಾಸೆಯಲ್ಲಿ ಕೊನೆಗೊಳ್ಳುತ್ತಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಸೈಯದ್ ಇಫ್ತಿಕರ್ ಅಂದ್ರಾಬಿ ಜಾಮೀನು ಅರ್ಜಿ ವಿಚಾರಣೆ ವೇಳೆ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿಆರ್‌ಬಿ) ನೀಡಿರುವ ದತ್ತಾಂಶಗಳನ್ನು ಪರಿಶೀಲಿಸಿದ ನ್ಯಾಯಪೀಠ '2019ರಿಂದ 2023ರವರೆಗಿನ ಅವಧಿಯಲ್ಲಿ ಯುಎಪಿಎ ಅಡಿ ಶಿಕ್ಷೆ ಘೋಷಣೆಯಾದ ಪ್ರಕರಣಗಳ ಪ್ರಮಾಣ ಶೇ 2ರಿಂದ 6ರಷ್ಟಿದೆ' ಎಂದು ಹೇಳಿತು.

