ಹೈದರಾಬಾದ್: 58 ನೇ ವಯಸ್ಸಿನಲ್ಲಿ ತೆಲಂಗಾಣದ ಸಚಿವೆ ಡಿ ಅನಸೂಯಾ ಸೀತಕ್ಕ ಅವರು ಎಲ್‌ಎಲ್‌ಎಂ ಪ್ರವೇಶ ಪರೀಕ್ಷೆ ಬರೆದಿದ್ದಾರೆ.
ಸಾಂವಿಧಾನಿಕ ಕಾನೂನುಗಳ ವಿಷಯದಲ್ಲಿ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿ ಪಡೆಯಲು ಸೀತಕ್ಕ ಅವರು ಸೋಮವಾರ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆಗೆ ಹಾಜರಾದರು.
ಮಾಜಿ ನಕ್ಸಲೈಟ್ ಸಹ ಆಗಿರುವ ಸೀತಕ್ಕ ಅವರು ಸದ್ಯ ಸಿಎಂ ರೇವಂತ ರೆಡ್ಡಿ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವೆ.
ಈಗಾಗಲೇ ಸೀತಕ್ಕ ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ಪಿ.ಎಚ್‌ಡಿಯನ್ನೂ ಪಡೆದಿದ್ದಾರೆ.
1980 ರಲ್ಲಿ ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಸೀತಕ್ಕ ಅವರು ಅಸ್ತ್ರಗಳನ್ನು ತೊರೆದು 1990ರಲ್ಲಿ ಮುಖ್ಯವಾಹಿನಿಗೆ ಬಂದಿದ್ದರು.
ಮುಲಗು ವಿಧಾನಸಭಾ ಕ್ಷೇತ್ರ ಪ‍್ರತಿನಿಧಿಸುವ ಅವರು ಟಿಡಿಪಿ ತೊರೆದು 2018ರಲ್ಲಿ ಕಾಂಗ್ರೆಸ್ ಸೇರಿದ್ದರು.

