ನವದೆಹಲಿ: ನೀಟ್ ಯುಜಿ-2026ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಇದೀಗ ಸೋರಿಕೆಯಾದ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಕೈಬರಹದಲ್ಲಿ ಬರೆದಿರುವ 60 ಪುಟಗಳ ಪ್ರಶ್ನೆ ಹಾಗೂ ಉತ್ತರ ಒಳಗೊಂಡ ಪತ್ರಿಕೆಯ ಪಿಡಿಎಫ್ ಪ್ರತಿಯು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ನೀಟ್ ಪರೀಕ್ಷೆ ನಡೆಯುವ ಮೊದಲೇ ಕೈಯಲ್ಲಿ ಬರೆಯಲಾದ ಪ್ರಶ್ನೆ ಹಾಗೂ ಉತ್ತರ ಪತ್ರಿಕೆಯ ಪ್ರತಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ವಿಚಾರವು ತನಿಖೆಯ ಮುಖ್ಯ ಕೇಂದ್ರ ಬಿಂದುವಾಗಿದೆ. ಸದ್ಯ, ಈ ಮಾಹಿತಿಯಿಂದಾಗಿ ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹೊಸ ಆಯಾಮ ಪಡೆದುಕೊಂಡಿದೆ.
ವಿವರಗಳ ಪ್ರಕಾರ, ಸೋರಿಕೆಯಾಗಿರುವ 60 ಪುಟಗಳ ಕೈಬರಹದ ಪಿಡಿಎಫ್‌ನಲ್ಲಿ ರಸಾಯನಶಾಸ್ತ್ರದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಒಳಗೊಂಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಪರೀಕ್ಷೆಗೂ ಮೊದಲೇ ಕೈಬರಹದ ಟಿಪ್ಪಣಿಗಳನ್ನು ಪಿಡಿಎಫ್ ಫೈಲ್ ಆಗಿ ಪರಿವರ್ತಿಸಿ, ಒಬ್ಬರಿಂದ ಮತ್ತೊಬ್ಬರಿಗೆ ರವಾನಿಸಲಾಗಿದೆ. 2026ರ ನೀಟ್ ಯುಜಿ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸದ್ಯ, ಕೈಬರಹದ ರಸಾಯನಶಾಸ್ತ್ರ ವಿಷಯವನ್ನು ಪರಿಶೀಲಿಸುತ್ತಿದ್ದಾರೆ .
ನೀಟ್ ಯುಜಿ 2026ರ ಕೈಬರಹದ ಪ್ರಶ್ನೆ ಪತ್ರಿಕೆಯು ಎನ್‌ಟಿಎ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮಾಜಿ ತಂಡದಲ್ಲಿದ್ದ ಪಿ.ವಿ. ಕುಲಕರ್ಣಿ ಮತ್ತು ಇನ್ನೋರ್ವ ಆರೋಪಿ ಮನೀಶಾ ಮಾಂಧರೆ ಅವರನ್ನು ಒಳಗೊಂಡ ದೊಡ್ಡ ಜಾಲಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗಿದೆ. ಈ ಇಬ್ಬರೂ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಕೊಠಡಿಗೆ ಪ್ರವೇಶಿಸುವ ಅನುಮತಿ ಹೊಂದಿದ್ದರು ಎಂದು ಹೇಳಲಾಗಿದೆ.
'ಕೈಬರಹದ ಪ್ರತಿಯು ನೀಟ್‌ನ 400ಕ್ಕೂ ಹೆಚ್ಚು ಪ್ರಶ್ನೆಗಳನ್ನು ಒಳಗೊಂಡಿದ್ದು, ಅನುಮಾನ ಬಾರದ ರೀತಿಯಲ್ಲಿ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಕೋಣೆಯಲ್ಲಿ ಕಾಪಿ ಮಾಡಲಾಗಿದೆ' ಎಂದು ವರದಿ ತಿಳಿಸಿದೆ.
ದೂರದರ್ಶನದ ವರದಿಯ ಪ್ರಕಾರ, ನೀಟ್ ಪ್ರಕರಣವು ಸಾರ್ವಜನಿಕವಾಗಿ ಹೊರಬರುವ ಮೊದಲೇ ರಾಜಸ್ಥಾನದ ಸಿಕಾರ್‌ನಲ್ಲಿರುವ ತರಬೇತಿ ಜಾಲಗಳ ಮೂಲಕ ಪಿಡಿಎಫ್ ಹೇಗೆ ಹೊರಬಂತು? ಎಂಬುದರ ಕುರಿತು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

