ರಾಯ್‌ಬರೇಲಿ: 'ಹಿಂದೆಂದೂ ಕಂಡಿರದಂತಹ ದೊಡ್ಡ ಆರ್ಥಿಕ ಹೊಡೆತವನ್ನು ದೇಶ ಎದುರಿಸಲಿದ್ದು, ಅದರ ಬಿಸಿ ಮೋದಿ, ಅದಾನಿ, ಅಂಬಾನಿ ಬದಲು ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ತಟ್ಟಲಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆರ್ಥಿಕ ಬಿರುಗಾಳಿ ಬರುತ್ತಿದೆ. ದೇಶಕ್ಕೆ ಅತ್ಯಂತ ಕಠಿಣ ದಿನಗಳು ಬರಲಿವೆ' ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ತಾವೇ ನೀಡಿದ ಮಿತವ್ಯಯದ ಕರೆಯನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
' ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬದಲು, ನರೇಂದ್ರ ಮೋದಿಯವರು ವಿದೇಶಿ ಪ್ರವಾಸಗಳಿಗೆ ಹೋಗದಂತೆ ದೇಶಕ್ಕೆ ಹೇಳುತ್ತಿದ್ದಾರೆ. ಆದರೆ, ಅವರು ಮಾತ್ರ ಇಡೀ ವಿಶ್ವವನ್ನೇ ಸುತ್ತುತ್ತಿದ್ದಾರೆ. ಇದು ಇಂದಿನ ದುಸ್ಥಿತಿ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು(ಮಂಗಳವಾರ) ತಮ್ಮ ಕ್ಷೇತ್ರ ರಾಯ್‌ಬರೇಲಿಗೆ ಭೇಟಿ ನೀಡಲು ಲಖನೌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಉತ್ತರ ಪ್ರದೇಶದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮತ್ತು ಕಾಂಗ್ರೆಸ್ ನಾಯಕಿ ಆರಾಧನಾ ಮಿಶ್ರಾ ಅವರು ಬರಮಾಡಿಕೊಂಡರು.

