ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗ ದಾಖಲೆ ಮಟ್ಟದ ನಗದು, ಮದ್ಯ ಮತ್ತು ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿದೆ.
ಫೆಬ್ರುವರಿ 26ರಿಂದ ಮೇ 6ರ ನಡುವೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಿಂದ ಒಟ್ಟು ₹ 1,444.96 ಕೋಟಿ ಮೌಲ್ಯದ ನಗದು, ಮದ್ಯ ಮತ್ತು ಉಚಿತ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಇದು 2021ರ ಚುನಾವಣೆಗೆ ಹೋಲಿಸಿದರೆ ಶೇ 40.14 ರಷ್ಟು ಹೆಚ್ಚಳವಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.
ರಾಜ್ಯವಾರು ಮಾಹಿತಿ ಪ್ರಕಾರ, ತಮಿಳುನಾಡಿನಲ್ಲಿ ಅತಿ ಹೆಚ್ಚು ₹ 662.28 ಕೋಟಿ ಮೌಲ್ಯದ ನಗದು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ₹ 573.41 ಕೋಟಿ, ಅಸ್ಸಾಂನಲ್ಲಿ ₹117.24 ಕೋಟಿ, ಕೇರಳದಲ್ಲಿ ₹80.67 ಕೋಟಿ ಹಾಗೂ ಪುದುಚೆರಿಯಲ್ಲಿ ₹9.72 ಕೋಟಿ ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ವಿದಾನಸಭಾ ಚುನಾವಣೆಗೆ ಹೋಲಿಸಿದರೆ, ಪಶ್ಚಿಮ ಬಂಗಾಳದಲ್ಲಿ ಶೆ.68.92ರಷ್ಟು, ತಮಿಳುನಾಡಿನಲ್ಲಿ ಶೆ.48 ರಷ್ಟು ಹೆಚ್ಚಳವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಶ್ಚಿಮ ಬಂಗಾಳದ ಫಲ್ತಾ ಕ್ಷೇತ್ರ ಹೊರತುಪಡಿಸಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ 39 ದಿನಗಳಲ್ಲಿ ₹154.89 ಕೋಟಿ ನಗದು, ₹183.33 ಕೋಟಿ ಮೌಲ್ಯದ ಮದ್ಯ, ₹250.14 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ಇತರೆ ಲೋಹಗಳು, ₹337.88 ಕೋಟಿ ಮೌಲ್ಯ ಡ್ರಗ್ಸ್ ಹಾಗೂ ₹518.73 ಕೋಟಿ ಮೌಲ್ಯದ ಉಚಿತ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣೆ ಆಯೋಗದ ಅಂಕಿ ಅಂಶಗಳು ತಿಳಿಸಿವೆ.
ಅತಿ ಹೆಚ್ಚು ಮದ್ಯವನ್ನು ಪಶ್ಚಿಮ ಬಂಗಾಳದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ₹151.86 ಕೋಟಿ ಮೌಲ್ಯದ 58 ಲಕ್ಷ ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಅಸ್ಸಾಂನಲ್ಲಿ ₹22.71 ಕೋಟಿ ಮೌಲ್ಯದ 8.28 ಲಕ್ಷ ಲೀಟರ್, ತಮಿಳುನಾಡಿನಲ್ಲಿ ₹4.94 ಕೋಟಿ ಮೌಲ್ಯದ 1.37 ಲಕ್ಷ ಲೀಟರ್, ಕೇರಳದಲ್ಲಿ ₹2.51 ಕೋಟಿ ಮೌಲ್ಯದ 78 ಸಾವಿರ ಲೀಟರ್, ಪುದುಚೆರಿಯಲ್ಲಿ ₹39 ಲಕ್ಷ ಮೌಲ್ಯದ 18 ಸಾವಿರ ಲೀಟರ್ ಮದ್ಯವನ್ನು ಜಪ್ತಿ ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿನಲ್ಲಿ ₹105.22 ಕೋಟಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ₹31.14 ಕೋಟಿ, ಕೇರಳದಲ್ಲಿ ₹12.12 ಕೋಟಿ, ಅಸ್ಸಾಂನಲ್ಲಿ ₹6.07 ಕೋಟಿ ಹಾಗೂ ಪುದುಚೆರಿಯಲ್ಲಿ ₹33 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಉಚಿತ ವಸ್ತುಗಳು ಅಥವಾ ಉಡುಗೊರೆಗಳನ್ನು ವಶಪಡಿಸಿಕೊಳ್ಳುವಲ್ಲಿಯೂ ತಮಿಳುನಾಡು ಮುಂಚೂಣಿಯಲ್ಲಿದೆ. ಇಲ್ಲಿ ₹307.65 ಕೋಟಿ ಮೌಲ್ಯದ ಉಡುಗೊರೆಗಳು, ಪಶ್ಚಿಮ ಬಂಗಾಳದಲ್ಲಿ ₹190.77 ಕೋಟಿ, ಅಸ್ಸಾಂನಲ್ಲಿ ₹14.7 ಕೋಟಿ, ಕೇರಳದಲ್ಲಿ ₹5.23 ಕೋಟಿ ಹಾಗೂ ಪುದಚೆರಿಯಲ್ಲಿ ₹2 ಲಕ್ಷ ಮೌಲ್ಯದ ಉಚಿತ ವಸ್ತುಗಳನ್ನು ವಶಪಡಿಸಲಾಗಿದೆ.

₹130.28 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಪಶ್ಚಿಮ ಬಂಗಾಳದಲ್ಲಿ ಜಪ್ತಿ ಮಾಡಲಾಗಿದೆ. ಈ ಮೂಲಕ ಬಂಗಾಳ ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ₹78.61 ಕೋಟಿ, ಅಸ್ಸಾಂನಲ್ಲಿ ₹70.08 ಕೋಟಿ ಹಾಗೂ ಕೇರಳದಲ್ಲಿ ₹2.25 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಲಾಗಿದೆ. ಪುದುಚೇರಿಯಲ್ಲಿ ಯಾವುದೇ ಡ್ರಗ್ಸ್ ಅನ್ನು ವಶಪಡಿಸಕೊಂಡಿಲ್ಲ.
ತಮಿಳುನಾಡಿನಲ್ಲಿ ₹165.86 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಅಮೂಲ್ಯ ಲೋಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ₹69.36 ಕೋಟಿ, ಅಸ್ಸಾಂನಲ್ಲಿ ₹3.68 ಕೋಟಿ, ಕೇರಳದಲ್ಲಿ ₹2.25 ಕೋಟಿ ಹಾಗೂ ಪುದಚೆರಿಯಲ್ಲಿ ₹8.99 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಡಿಜಿಪಿಗಳು ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಿರಂತರ ಸಭೆ ನಡೆಸಿ ಬಿಗಿ ಕ್ರಮ ಕೈಗೊಂಡಿದ್ದರಿಂದ ಈ ಬಾರಿ ದೊಡ್ಡ ಮಟ್ಟದ ಜಪ್ತಿ ಸಾಧ್ಯವಾಯಿತು ಎಂದು ಆಯೋಗ ತಿಳಿಸಿದೆ.

