ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ (ಮೇ 6 ರಂದು) ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಶಾಲೆಗಳು ಶ್ರೇಣೀಕೃತ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುವ ಬದಲು ಸಮುದಾಯದ ಸಹಭಾಗಿತ್ವದ ತಾಣಗಳನ್ನಾಗಿ ಮಾಡಲು ಉದ್ದೇಶಿಸಲಾಗಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಶಾಲೆಗಳ ನಿರ್ವಹಣೆಯಲ್ಲಿ ಸಮುದಾಯಗಳ ಪಾತ್ರ: ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ
ಒಂದು ಸಾಲಿನಲ್ಲಿಶಾಲೆಗಳ ನಿರ್ವಹಣೆಯಲ್ಲಿ ಪೋಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ಶಾಲಾ ನಿರ್ವಹಣಾ ಸಮಿತಿಗಳಿಗೆ (SMC) ಹೊಸ ಸಮಗ್ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಪ್ರಮುಖ ಅಂಶಗಳು• ಎಸ್‌ಎಂಸಿ ರಚನೆಪ್ರತಿ ಶಾಲೆಯಲ್ಲೂ ಎಸ್‌ಎಂಸಿ ಇರುವುದು ಕಡ್ಡಾಯವಾಗಿದ್ದು, ಶೈಕ್ಷಣಿಕ ಅವಧಿ ಪ್ರಾರಂಭವಾದ ಒಂದು ತಿಂಗಳೊಳಗೆ ಸಮಿತಿಯನ್ನು ರಚಿಸಬೇಕು. ಅಸ್ತಿತ್ವದಲ್ಲಿರುವ ಸಮಿತಿಗಳನ್ನು ಎಸ್‌ಎಂಸಿಗಳಾಗಿ ಬದಲಾಯಿಸಲು ನಿರ್ದೇಶಿಸಲಾಗಿದೆ.• ಸದಸ್ಯರ ಸಂಯೋಜನೆ ಮತ್ತು ಮೀಸಲಾತಿಸಮಿತಿಯಲ್ಲಿ ಶೇ 75ರಷ್ಟು ಪೋಷಕರು ಇರಬೇಕು ಮತ್ತು ಮಹಿಳೆಯರಿಗೆ ಶೇ 50ರಷ್ಟು ಪ್ರಾತಿನಿಧ್ಯ ನೀಡಬೇಕು. ಉಳಿದ ಸ್ಥಾನಗಳಲ್ಲಿ ಶಿಕ್ಷಕರು, ತಜ್ಞರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಅವಕಾಶವಿದೆ.• ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಎಸ್‌ಎಂಸಿಗಳು ವಿದ್ಯಾರ್ಥಿಗಳ ಹಾಜರಾತಿ, ಕಲಿಕೆ, ಮೂಲಸೌಕರ್ಯ, ಸುರಕ್ಷತೆ ಮತ್ತು நிதி ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಬೇಕು. ಮಾಸಿಕ ಸಭೆ ನಡೆಸುವುದು ಮತ್ತು ಸಾರ್ವಜನಿಕವಾಗಿ ಮಾಹಿತಿ ಪ್ರದರ್ಶಿಸುವುದು ಕಡ್ಡಾಯ.• ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಶಾಲೆಗಳು ಪೋಕ್ಸೋ ಕಾಯ್ದೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸುವುದನ್ನು ಖಚಿತಪಡಿಸಬೇಕು. ಕಿರುಕುಳ ಪ್ರಕರಣಗಳನ್ನು ತಕ್ಷಣ ವರದಿ ಮಾಡುವುದು ಸಮಿತಿಯ ಪ್ರಮುಖ ಹೊಣೆಗಾರಿಕೆಯಾಗಿದೆ.• ಆರ್ಥಿಕ ಸ್ವಾಯತ್ತತೆ ಮತ್ತು ಅಭಿವೃದ್ಧಿ₹30 ಲಕ್ಷದವರೆಗಿನ ಕಾಮಗಾರಿಗಳನ್ನು ಸಮಿತಿಯೇ ನಿರ್ವಹಿಸಬಹುದು. ಸಿಎಸ್‌ಆರ್ ನಿಧಿ, ದೇಣಿಗೆ ಮತ್ತು ಸ್ವಯಂಸೇವಕರ ಮೂಲಕ ಸಂಪನ್ಮೂಲ ಕ್ರೋಢೀಕರಿಸಲು ಅವಕಾಶ ಕಲ್ಪಿಸಲಾಗಿದೆ.• ಮೂರು ವರ್ಷಗಳ ಅಭಿವೃದ್ಧಿ ಯೋಜನೆಪ್ರತಿ ಶಾಲೆಯೂ ಮೂರು ವರ್ಷಗಳ ದೀರ್ಘಾವಧಿ ಅಭಿವೃದ್ಧಿ ಯೋಜನೆಯನ್ನು (SDP) ತಯಾರಿಸಬೇಕು, ಇದು ಸಾರ್ವಜನಿಕವಾಗಿ ಲಭ್ಯವಿರಬೇಕು ಮತ್ತು ವಾರ್ಷಿಕವಾಗಿ ಪರಿಶೀಲಿಸಲ್ಪಡಬೇಕು.ಪ್ರಮುಖ ಅಂಕಿಅಂಶಗಳುಮೇ 6ಮಾರ್ಗಸೂಚಿ ಬಿಡುಗಡೆ ದಿನಾಂಕಶೇ 75ಸಮಿತಿಯಲ್ಲಿ ಪೋಷಕರ ಕನಿಷ್ಠ ಪಾಲುಶೇ 50ಸಮಿತಿಯಲ್ಲಿ ಮಹಿಳಾ ಪ್ರಾತಿನಿಧ್ಯಶೇ 50ಸಭೆಗಳ ನಿರ್ಣಯಕ್ಕೆ ಕನಿಷ್ಠ ಹಾಜರಾತಿ₹30 ಲಕ್ಷಎಸ್‌ಎಂಸಿ ನೇರ ನಿರ್ವಹಣಾ ಮಿತಿಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಶಾಲಾ ನಿರ್ವಹಣಾ ಸಮಿತಿ (SMC) ಎಂದರೇನು?:
ಎಸ್‌ಎಂಸಿ ಶಾಲಾ ಮಟ್ಟದ ಸಮಿತಿಗಳಾಗಿದ್ದು, ಪೋಷಕರು, ಶಿಕ್ಷಕರು, ಸ್ಥಳೀಯ ಪ್ರಾಧಿಕಾರದ ಸದಸ್ಯರು ಮತ್ತು ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡಿರುತ್ತವೆ. ಇವು ಶಾಲೆಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಗೆ ಸಹಾಯ ಮಾಡುತ್ತವೆ. ಇವು ಈಗಾಗಲೇ ಶಿಕ್ಷಣ ಹಕ್ಕು (RTE) ಕಾಯ್ದೆಯಡಿ ಪ್ರಾಥಮಿಕ ಶಾಲೆಗಳಲ್ಲಿ ಅಸ್ತಿತ್ವದಲ್ಲಿವೆ. ಆದರೆ ಹೊಸ ಮಾರ್ಗಸೂಚಿಗಳು ಅವುಗಳ ಕಾರ್ಯ ವ್ಯಾಪ್ತಿ ಮತ್ತು ಜವಾಬ್ದಾರಿಗಳನ್ನು ವಿಸ್ತರಿಸಿವೆ.
ಹೊಸ ಮಾರ್ಗಸೂಚಿಗಳ ಅನ್ವಯ ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ (12 ನೇ ತರಗತಿಯವರೆಗೆ) ಸೇರಿದಂತೆ ಪ್ರತಿಯೊಂದು ಶಾಲೆಯೂ ಎಸ್‌ಎಂಸಿಯನ್ನು ಹೊಂದಿರಬೇಕೆಂದು ಹೇಳಿದೆ. ಏಕರೂಪತೆಗಾಗಿ ಅಸ್ತಿತ್ವದಲ್ಲಿರುವ ಶಾಲಾ ನಿರ್ವಹಣಾ ಅಭಿವೃದ್ಧಿ ಸಮಿತಿಗಳನ್ನು (SMDC) ಎಸ್‌ಎಂಸಿಗಳಾಗಿ ಬದಲಾಯಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಶೈಕ್ಷಣಿಕ ಅವಧಿ ಪ್ರಾರಂಭವಾದ ಒಂದು ತಿಂಗಳೊಳಗೆ ಪ್ರತಿ ಶಾಲೆಯು ಎಸ್‌ಎಂಸಿ ರಚಿಸುವಂತೆಯೂ ತಿಳಿಸಲಾಗಿದೆ.
ಸಮಿತಿಗಳಲ್ಲಿ ಪೋಷಕರದ್ದೇ ಪ್ರಾಬಲ್ಯ:
ಎಸ್‌ಎಂಸಿ ಸದಸ್ಯರಲ್ಲಿ ಶೇ 75ರಷ್ಟು ಸದಸ್ಯರು ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರಾಗಿರಬೇಕು.
ಉಳಿದ ಸದಸ್ಯರಲ್ಲಿಇವರು ಇರಬಹುದು
ಶಿಕ್ಷಕರು
ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು
ಶಿಕ್ಷಣ ತಜ್ಞರು
ವಿಷಯ ತಜ್ಞರು
ಹಳೆಯ ವಿದ್ಯಾರ್ಥಿಗಳು
ಹಿರಿಯ ವಿದ್ಯಾರ್ಥಿಗಳು
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಂತಹ ಮುಂಚೂಣಿ ಕಾರ್ಯಕರ್ತರು
ಮಾರ್ಗಸೂಚಿಗಳ ಅನ್ವಯ ಮಹಿಳೆಯರಿಗೆ ಶೇ 50ರಷ್ಟು ಪ್ರಾತಿನಿಧ್ಯ, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯಕ್ಕಾಗಿ ಪೋಷಕರ ಸೇರ್ಪಡೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಾಯೋಗಿಕವಾಗಿ ಹೇಳುವುದಾದರೆ, ಶಾಲೆಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಪೋಷಕರು ಈಗ ಹೆಚ್ಚಿನ ಅಧಿಕಾರವನ್ನು ಹೊಂದಿರುತ್ತಾರೆ ಎಂದರ್ಥ.
ಹೆಚ್ಚಿನ ಮೇಲ್ವಿಚಾರಣೆ :
ಸಮಿತಿಗಳು ಇನ್ನು ಮುಂದೆ ಕೇವಲ ಮೂಲಸೌಕರ್ಯ ಅಥವಾ ಸಭೆಗಳಿಗೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ, ಶಾಲೆಗೆ ಗೈರಾಗುವುದನ್ನು ತಡೆಯುವುದು, ಕಲಿಕೆಯ ಫಲಿತಾಂಶಗಳು, ಸರ್ಕಾರಿ ಯೋಜನೆಗಳ ಅನುಷ್ಠಾನ, ಶಾಲಾ ಸುರಕ್ಷತೆ, ಮಾನಸಿಕ ಯೋಗಕ್ಷೇಮ, ಕಿರುಕುಳ ತಡೆಗಟ್ಟುವುದು, ಮೂಲಸೌಕರ್ಯ ಮತ್ತು ಹಣಕಾಸು ನಿರ್ವಹಣೆ ಸೇರಿದಂತೆ ಶಾಲಾ ಕಾರ್ಯಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಅಧಿಕಾರ ನೀಡಲಾಗಿದೆ.
ಮಕ್ಕಳು ಅನುಭವಿಸುವ ಯಾವುದೇ ಕಿರುಕುಳ ಅಥವಾ ನಿಂದನೆ ಪ್ರಕರಣಗಳನ್ನು ಎಸ್‌ಎಂಸಿಗಳು ತಕ್ಷಣ ವರದಿ ಮಾಡಬೇಕು ಎಂದೂ ಹೇಳಲಾಗಿದೆ.
ಮಾಸಿಕ ಸಭೆಗಳು ಮತ್ತು ಸಾರ್ವಜನಿಕ ಹೊಣೆಗಾರಿಕೆ:
ಶಿಕ್ಷಣ ಸಚಿವಾಲಯವು ಮಾಸಿಕ ಎಸ್‌ಎಂಸಿ ಸಭೆಗಳನ್ನು ಕಡ್ಡಾಯಗೊಳಿಸಿದೆ. ನಿರ್ಧಾರಗಳು ಮಾನ್ಯವಾಗಲು ಕನಿಷ್ಠ ಶೇ 50ರಷ್ಟು ಸದಸ್ಯರು ಹಾಜರಿರಬೇಕು ಎಂದು ಹೇಳಲಾಗಿದೆ.
ಮುಖ್ಯವಾಗಿ, ಸಭೆಯ ನಡಾವಳಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು, ಸಲಹಾ ಪೆಟ್ಟಿಗೆಗಳು ಮತ್ತು ಪ್ರತಿಕ್ರಿಯೆ ರಿಜಿಸ್ಟರ್‌ಗಳನ್ನು ನಿರ್ವಹಿಸಲು ಮತ್ತು ಸಮುದಾಯದ ಪ್ರತಿಕ್ರಿಯೆಯನ್ನು ನಿಯಮಿತವಾಗಿ ಪರಿಶೀಲಿಸಲು ಶಾಲೆಗಳಿಗೆ ಸೂಚಿಸಲಾಗಿದೆ.
ಶಾಲಾ ಸುರಕ್ಷತೆ ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು:
ಮಾರ್ಗಸೂಚಿಗಳಲ್ಲಿನ ಅತ್ಯಂತ ಪ್ರಮುಖ ಅಂಶವೆಂದರೆ ಮಕ್ಕಳ ಸುರಕ್ಷತೆ. ಶಾಲೆಗಳು ಪೋಕ್ಸೋ (POCSO) ಕಾಯ್ದೆ, ಶಾಲಾ ಸುರಕ್ಷತಾ ಪ್ರತಿಜ್ಞೆ ಮತ್ತು ಆಂತರಿಕ ದೂರು ಸಮಿತಿಗಳಿಗೆ (ಐಸಿಸಿ) ಸಂಬಂಧಿಸಿದ ಮಾಹಿತಿಯನ್ನು ನೀಡಲು ತಿಳಿಸಲಾಗಿದೆ.
ಮಾರ್ಗಸೂಚಿಗಳ ಅನ್ವಯ ಎಸ್‌ಎಂಸಿ ಮಾಡಬೇಕಾದ ಕಾರ್ಯಗಳು:
ಕಿರುಕುಳ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ದೂರುಗಳ ಬಗ್ಗೆ ಚರ್ಚಿಸುವುದು.
ಶಾಲಾ ಆವರಣದ ತ್ರೈಮಾಸಿಕ ಸುರಕ್ಷತಾ ನಡಿಗೆ (Safety Walks) ನಡೆಸುವುದು.
ವಿಪತ್ತು ಸಿದ್ಧತೆಯನ್ನು ಪರಿಶೀಲಿಸುವುದು.
ಶಾಲೆಗಳು ಸುರಕ್ಷಿತ ಮತ್ತು ಮಕ್ಕಳ ಸ್ನೇಹಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.
ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನೂ ಶಾಲಾ ಸುರಕ್ಷತೆಯ ಜವಾಬ್ದಾರಿಗಳ ಭಾಗವಾಗಿ ಸೇರಿಸಲಾಗಿದೆ.
ಸಿಎಸ್‌ಆರ್ ನಿಧಿ ಮತ್ತು ದೇಣಿಗೆ:
ಹೊಸ ಮಾರ್ಗಸೂಚಿಗಳ ಪ್ರಕಾರ ಶಾಲೆಗಳಿಗೆ ಹಣ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಎಸ್‌ಎಂಸಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಸಮಿತಿಗಳು ಕಂಪನಿಗಳು ಮತ್ತು ಪಿಎಸ್‌ಯುಗಳಿಂದ ಸಿಎಸ್‌ಆರ್ ನಿಧಿ, ದೇಣಿಗೆಗಳು, ಸ್ವಯಂಸೇವಕರ ಬೆಂಬಲ ಪಡೆಯಲು ಪ್ರೋತ್ಸಾಹಿಸಲಾಗಿದೆ.
ಅಲ್ಲದೇ ಸರ್ಕಾರದ 'ವಿದ್ಯಾಂಜಲಿ' ಉಪಕ್ರಮದ ಮೂಲಕ ಹಳೆಯ ವಿದ್ಯಾರ್ಥಿಗಳು, ನಿವೃತ್ತ ವೃತ್ತಿಪರರು ಮತ್ತು ಸ್ಥಳೀಯ ನಿವಾಸಿಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಪ್ರೋತ್ಸಾಹಿಸಲಾಗಿದೆ.
ನಿರ್ಮಾಣ ಮತ್ತು ವೆಚ್ಚದ ಮೇಲ್ವಿಚಾರಣೆ:
ಹಣಕಾಸು ನಿರ್ವಹಣೆ ಮತ್ತು ಮೂಲಸೌಕರ್ಯ ಮೇಲ್ವಿಚಾರಣೆಯಲ್ಲಿ ಎಸ್‌ಎಂಸಿಗಳಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗಿದೆ. ಮಾರ್ಗಸೂಚಿಗಳ ಪ್ರಕಾರ ₹30 ಲಕ್ಷ ವರೆಗಿನ ಕಾಮಗಾರಿಗಳನ್ನು ನೇರವಾಗಿ ಎಸ್‌ಎಂಸಿಗಳ ಮೂಲಕವೇ ನಿರ್ವಹಿಸಬಹುದು.
ಸಮಿತಿಗಳು ಮಾಡಬೇಕಾದ್ದು:
ಅನುದಾನಗಳು ಮತ್ತು ವೆಚ್ಚಗಳನ್ನು ಮೇಲ್ವಿಚಾರಣೆ
ಹಣಕಾಸಿನ ದಾಖಲೆಗಳನ್ನು ನಿರ್ವಹಣೆ
ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ನಡೆಸುವುದು
ಪಾರದರ್ಶಕತೆಗಾಗಿ ಸಭೆಯ ನಡಾವಳಿಗಳು ಮತ್ತು ಹಣಕಾಸಿನ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು.
ಸಾಧ್ಯವಾದಲ್ಲೆಲ್ಲಾ ಹಣಕಾಸು ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವಂತೆ ಶಾಲೆಗಳನ್ನು ಪ್ರೋತ್ಸಾಹಿಸಲಾಗಿದೆ
ಎಸ್‌ಎಂಸಿ ಸಮಿತಿಗಳು ಇವುಗಳನ್ನು ಆಯೋಜಿಸುವಂತೆಯೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ನಿಯಮಿತವಾಗಿ ಪೋಷಕ-ಶಿಕ್ಷಕರ ಸಭೆ ಕರೆಯುವುದು
ಪೌಷ್ಟಿಕಾಂಶ ಆಹಾರದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು
ಆರೋಗ್ಯ ಶಿಬಿರಗಳು
ಶಾಲೆಗಳಲ್ಲಿ ಕಿಚನ್ ಗಾರ್ಡನ್ ನಿರ್ಮಿಸುವುದು ಮತ್ತು 'ತಿಥಿ ಭೋಜನ್' ( ಹುಟ್ಟುಹಬ್ಬ, ವಾರ್ಷಿಕೋತ್ಸದಂತಹ ವಿಶೇಷ ಸಂದರ್ಭಗಳಲ್ಲಿ ಜನರು ಸ್ವಯಂಪ್ರೇರಿತವಾಗಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಊಟ ನೀಡುವುದು) ಉಪಕ್ರಮಗಳಲ್ಲಿ ಸಮುದಾಯವನ್ನು ತೊಡಗಿಸಿಕೊಳ್ಳಲು ಸಹ ಪ್ರೋತ್ಸಾಹಿಸಲಾಗಿದೆ.
ಮೂರು ವರ್ಷಗಳ ಅಭಿವೃದ್ಧಿ ಯೋಜನೆಗಳು:
ಮಾರ್ಗಸೂಚಿಯಲ್ಲಿನ ಮತ್ತೊಂದು ಪ್ರಮುಖ ಅಂಶವೆಂದರೆ ಶಾಲಾ ಅಭಿವೃದ್ಧಿ ಯೋಜನೆ (SDP). ಪ್ರತಿ ಶಾಲೆಯು ದಾಖಲಾತಿ ಗುರಿಗಳು, ಶಿಕ್ಷಕರ ಅಗತ್ಯತೆಗಳು, ಮೂಲಸೌಕರ್ಯಗಳ ಕೊರತೆ, ಹಣಕಾಸಿನ ಅಗತ್ಯತೆಗಳು ಮತ್ತು ಶೈಕ್ಷಣಿಕ ಸುಧಾರಣಾ ಗುರಿಗಳನ್ನು ಒಳಗೊಂಡ ಮೂರು ವರ್ಷಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು. ಈ ಯೋಜನೆಗಳು ಸಾರ್ವಜನಿಕರಿಗೆ ಲಭ್ಯವಿರಬೇಕು ಮತ್ತು ವಾರ್ಷಿಕವಾಗಿ ಪರಿಶೀಲನೆಗೆ ಒಳಪಡಬೇಕು ಎಂದೂ ಹೇಳಲಾಗಿದೆ.

