ಗುವಾಹಟಿ: ಚಹಾ ತೋಟಗಳ ನಾಡು, ಈಶಾನ್ಯದ ಹೆಬ್ಬಾಗಿಲು ಎನಿಸಿಕೊಂಡಿರುವ ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಈ ಮೂಲಕ ಮತ್ತೆ ಅಧಿಕಾರಕ್ಕೇರಬೇಕೆನ್ನುವ ಕಾಂಗ್ರೆಸ್‌ನ 10 ವರ್ಷಗಳ ಕನಸು ಭಗ್ನವಾಗುತ್ತಿದೆ.
ಈ ಬಾರಿ ಏಪ್ರಿಲ್ 9ರಂದು 126 ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ 722 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು.
ಪ್ರಮುಖ ಪಕ್ಷಗಳಾಗಿರುವ ಬಿಜೆಪಿಯಿಂದ ಹಾಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ರಾಜ್ಯಾಧ್ಯಕ್ಷ ಗೌರವ್ ಗೊಗೊಯ್ ಸ್ಪರ್ಧಿಸಿದ್ದರು.
ಈ ಬಾರಿ ಶೇ 4ರಷ್ಟು ಮತದಾನ ಹೆಚ್ಚಳವಾಗಿದೆ.
ಹೇಗಿತ್ತು ಈ ಹಿಂದೆ ?
ಆಸ್ಸಾಂನಲ್ಲಿ 15 ವಿಧಾನಸಭಾ ಚುನಾವಣೆಗಳು ನಡೆದಿವೆ. ಇದರಲ್ಲಿ 1952ರಿಂದ 1972ರ ವರೆಗೆ ಕಾಂಗ್ರೆಸ್ ಅಧಿಕಾರ ನಡೆಸಿದ್ದು, 1978ರಿಂದ 2016ರ ವರೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಅಸ್ಸಾಂ ಗಣ ಪರಿಷತ್, ಕಾಂಗ್ರೆಸ್ ಅಧಿಕಾರ ನಡೆಸಿವೆ. 2001ರಿಂದ 2011ರ ವರೆಗೆ ಸತತ ಮೂರು ಬಾರಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.
2016, 2021ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಸತತ ಎರಡು ಬಾರಿ ಆಡಳಿತ ನಡೆಸಿದೆ. 2011ರಲ್ಲಿ ನಡೆದ ಚುನಾವಣೆಯಲ್ಲಿ ಶೇ 76ರಷ್ಟು ಮತದಾನದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿತ್ತು.
2016ರಲ್ಲಿ ಶೇ 84.72ರಷ್ಟು ಮತದಾನವಾಗಿತ್ತು. ಈ ಮೂಲಕ 2011ಕ್ಕಿಂತ ಸುಮಾರು ಶೇ 8ರಷ್ಟು ಹೆಚ್ಚು ಮತದಾನ ನಡೆದಿತ್ತು. 2016ರಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಸೋಲಿಸಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರಿತ್ತು.
2021ರಲ್ಲಿ ಶೇ 82ರಷ್ಟು ಮತದಾನ ನಡೆದಿತ್ತು. ಶೇ 2ರಷ್ಟು ಮತ ಪ್ರಮಾಣ ಕುಸಿದರೂ ಬಿಜೆಪಿ ಮರಳಿ ಅಧಿಕಾರಕ್ಕೇರಿತ್ತು. 2026ರಲ್ಲಿ ಶೇ 85.64ರಷ್ಟು ಮತದಾನವಾಗಿದೆ. ಈ ಬಾರಿಯೂ ಮತದಾರ ಬಿಜೆಪಿ ಕೈ ಹಿಡಿಯುವ ಲಕ್ಷಣಗಳು ನಿಚ್ಚಳವಾಗಿದೆ.

