ಹೈದರಾಬಾದ್ : ಪ್ರಸಕ್ತ ಬೇಸಿಗೆ ಋತುವಿನಲ್ಲಿ ರಾಜ್ಯಾದ್ಯಂತ ಕಂಡು ಬಂದಿರುವ ಬಿಸಿ ಗಾಳಿ ಪರಿಸ್ಥಿತಿಯಿಂದ 16 ಮಂದಿ ಮೃತಪಟ್ಟಿದ್ದಾರೆ ಎಂದು ತೆಲಂಗಾಣದ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಶನಿವಾರ ತಿಳಿಸಿದ್ದಾರೆ.
ಬಿಸಿಗಾಳಿ ಪರಿಸ್ಥಿತಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ಸಚಿವರು ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿಗಳ ಆಧಾರದಲ್ಲಿ ಏಳು ಜಿಲ್ಲೆಗಳಲ್ಲಿ ಈ ಸಾವುಗಳು ವರದಿಯಾಗಿವೆ ಎಂದರು.
ಸರಕಾರ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಜಯಶಂಕರ್ ಭೂಪಾಲಪಲ್ಲಿಯಲ್ಲಿ 4 ಸಾವುಗಳು ವರದಿಯಾಗಿದ್ದರೆ, ವಾರಂಗಲ್ ನಗರ, ಕರೀಂನಗರ ಮತ್ತು ನಿಝಾಮಾಬಾದ್‌ನಲ್ಲಿ ತಲಾ 3 ಸಾವುಗಳ ಸಂಭವಿಸಿವೆ. ಜೋಗುಲಾಂಬ ಗಡ್ವಾಲ್, ರಂಗಾರೆಡ್ಡಿ ಮತ್ತು ಸೂರ್ಯಪೇಟೆಯಿಂದ ತಲಾ ಒಂದು ಸಾವು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬಿಸಿ ಗಾಳಿಯಿಂದಾಗಿ ಮೃತರ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ 4 ಲಕ್ಷ ರೂ. ಪರಿಹಾರ ಧನ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

