ಹೈದರಾಬಾದ್: ಜೈಲಿನ ಜೀವನ ಹೇಗಿರುತ್ತದೆ ಎಂಬ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಹೈದರಾಬಾದ್‌ನ ಚಂಚಲಗುಡ ಕೇಂದ್ರ ಕಾರಾಗೃಹ ನಿಮಗೊಂದು ವಿಶಿಷ್ಟ ಅವಕಾಶ ನೀಡುತ್ತಿದೆ. ಸಾರ್ವಜನಿಕರು 12 ಅಥವಾ 24 ಗಂಟೆಗಳ ಕಾಲ ಜೈಲಿನಲ್ಲಿ ಕೈದಿಯಂತೆ ಸಮಯ ಕಳೆಯಲು ಅನುವು ಮಾಡಿಕೊಡುವ 'ಫೀಲ್ ದಿ ಜೈಲ್' ಎಂಬ ವಿನೂತನ ಯೋಜನೆಯನ್ನು ಮಂಗಳವಾರ ಆರಂಭಿಸಿದೆ.
ಈ ಯೋಜನೆಯಡಿ 24 ಗಂಟೆಗಳ ಕಾಲ ಜೈಲಿನಲ್ಲಿ ಇರಲು ಬಯಸುವವರು ₹2,000 ಹಾಗೂ 12 ಗಂಟೆಗಳ ಕಾಲ ಇರಲು ಬಯಸುವವರು ₹1,000 ಶುಲ್ಕ ಪಾವತಿಸಬೇಕಾಗುತ್ತದೆ.
ಈ ಕಾರ್ಯಕ್ರಮದ ಭಾಗವಾಗಿ ಬರುವವರಿಗೆ ಜೈಲಿನ ವಿಶೇಷ ಕೋಣೆಗಳಲ್ಲಿ ವಾಸ್ತವ್ಯ ಹೂಡಲು ಅವಕಾಶ ನೀಡಲಾಗುತ್ತದೆ. ಅಲ್ಲಿನ ಕೈದಿಗಳಿಗೆ ನೀಡಲಾಗುವ ಆಹಾರವನ್ನೇ ಇವರಿಗೂ ಉಣಬಡಿಸಲಾಗುತ್ತದೆ. ಅಷ್ಟೇ ಅಲ್ಲದೆ, ಜೈಲಿನ ಕಟ್ಟುನಿಟ್ಟಿನ ನಿಯಮಗಳು ಮತ್ತು ದಿನಚರಿಯನ್ನು ಪಾಲಿಸಬೇಕಾಗುತ್ತದೆ. ವೈಯಕ್ತಿಕ ಸ್ವಾತಂತ್ರ್ಯದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಮತ್ತು ಜೈಲಿನ ಬದುಕಿನ ಬಗ್ಗೆ ಅರಿವು ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಟೊದಲ್ಲಿ, ಚಿಕ್ಕ ಮಂಚ, ಅದರ ಮೇಲೆ ಕಪ್ಪು ಕಂಬಳಿ ಹಾಗೂ ಪಕ್ಕದಲ್ಲೇ ಇರಿಸಲಾದ ಸ್ಟೀಲ್ ತಟ್ಟೆ ಮತ್ತು ಲೋಟಗಳು ಜೈಲಿನ ವಾತಾವರಣವನ್ನು ಬಿಂಬಿಸುತ್ತಿವೆ.
ಇನ್ನು, ಈ ವಿನೂತನ ಯೋಜನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. 'ಜೈಲಿನಲ್ಲಿ ನಿಜವಾದ ಕೈದಿಗಳಿಗೆ ಬೀಳುವಂತೆ ಇವರಿಗೂ ಏಟುಗಳು ಬೀಳುತ್ತವೆಯೇ? ಚಮಚ ಅಥವಾ ಸ್ಟೀಲ್ ತಟ್ಟೆಯಿಂದ ಮುಖದ ಮೇಲೆ ಗಾಯದ ಗುರುತುಗಳೂ ಸಿಗುತ್ತವೆಯೇ?' ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಸಂಗಾರೆಡ್ಡಿ ಹೆರಿಟೇಜ್ ಜೈಲು ಮ್ಯೂಸಿಯಂ ಆರಂಭಿಸಿದ್ದ 'ಒಂದು ದಿನದ ಜೈಲು ಅನುಭವ' ಯೋಜನೆ ಜನಪ್ರಿಯವಾಗಿತ್ತು. ಅದೇ ಮಾದರಿಯನ್ನು ಈಗ ಚಂಚಲಗುಡದಲ್ಲೂ ಅಳವಡಿಸಿಕೊಳ್ಳಲಾಗಿದೆ. ಶಿಸ್ತು, ಕಾನೂನು ವ್ಯವಸ್ಥೆ ಮತ್ತು ಜೈಲಿನ ಕಠಿಣ ಬದುಕಿನ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

