ನವದೆಹಲಿ: ದೇಶದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ನಿಖರ ಚುನಾವಣಾ ಸಮೀಕ್ಷೆಗಳಿಗೆ ಹೆಸರಾಗಿರುವ ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಗುಪ್ತಾ ಭಾರತೀಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಭಾರತದಲ್ಲಿ ಸದ್ಯಕ್ಕೆ ಭಾರತೀಯ ಜನತಾ ಪಾರ್ಟಿಯ ರಾಜಕೀಯ ಸಾರ್ವಭೌಮತ್ವ ಅಲುಗಾಡಲ್ಲ, ಕನಿಷ್ಠ ಮುಂದಿನ 20 ವರ್ಷಗಳ ಕಾಲ ದೇಶದಲ್ಲಿ ಬಿಜೆಪಿಯ ಪ್ರಭುತ್ವವೇ ಮುಂದುವರಿಯಲಿದೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ದೇಶದಲ್ಲಿ ಕಾಂಗ್ರೆಸ್ ಪಕ್ಷ ದಶಕಗಳ ಕಾಲ ಅನುಭವಿಸಿದ ಏಕಸ್ವಾಮ್ಯದ ಆಡಳಿತಕ್ಕೆ ಪ್ರಸ್ತುತ ಬಿಜೆಪಿಯ ಸ್ಥಿತಿಯನ್ನು ಹೋಲಿಸಿರುವ ಪ್ರದೀಪ್ ಗುಪ್ತಾ, ಭಾರತೀಯ ರಾಜಕೀಯವು ಸುದೀರ್ಘ ಅವಧಿಯ ರಾಜಕೀಯ ಚಕ್ರಗಳ ಮೇಲೆ ಚಲಿಸುತ್ತದೆ ಮತ್ತು ಸದ್ಯಕ್ಕೆ ಬಿಜೆಪಿ ಅಂತಹ ಅತ್ಯುನ್ನತ ಹಂತದ ಮಧ್ಯಭಾಗದಲ್ಲಿದೆ ಎಂದು ವಿಶ್ಲೇಷಿಸಿದ್ದಾರೆ.
ರಾಜಕೀಯದಲ್ಲಿ 20 ವರ್ಷಗಳ ಚಕ್ರ: ಗುಪ್ತಾ ಲೆಕ್ಕಾಚಾರವೇನು..?
ರಾಜಕೀಯದಲ್ಲಿ ಒಂದು ನಿರ್ದಿಷ್ಟ ಮಿತಿ ಇರುತ್ತದೆ. ಹಿಂದೆ ಕಾಂಗ್ರೆಸ್ ಪಕ್ಷವು 1977 ರವರೆಗೆ ಸತತವಾಗಿ ದೇಶವನ್ನು ಆಳಿತು. ಆ ನಂತರವೇ ಅದು ಕಠಿಣ ಸವಾಲುಗಳನ್ನು ಎದುರಿಸಲು ಪ್ರಾರಂಭಿಸಿತು. ಆ ದಿನಗಳಲ್ಲಿ ನಾವು ರಾಜಕೀಯ ತಲೆಮಾರೊಂದರ ಅವಧಿ ಸುಮಾರು 20 ವರ್ಷಗಳು ಎಂದು ಮಾತನಾಡಿಕೊಳ್ಳುತ್ತಿದ್ದೆವು. ಆ 20 ವರ್ಷಗಳ ರಾಜಕೀಯ ಚಕ್ರ ಈಗಲೂ ಅನ್ವಯಿಸುತ್ತದೆ ಎಂದು ಪ್ರದೀಪ್ ಗುಪ್ತಾ ವಿವರಿಸಿದ್ದಾರೆ.
ಮುಂದುವರೆದು ಮಾತನಾಡಿರುವ ಗುಪ್ತಾ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಆಡಳಿತಾವಳಿ ಮತ್ತು ರಾಜ್ಯಗಳಲ್ಲಿ ಪಕ್ಷದ ಬಲಿಷ್ಠ ನೆಟ್‌ವರ್ಕ್ ಇರುವವರೆಗೆ ವಿರೋಧ ಪಕ್ಷಗಳಿಗೆ ಗೆಲುವು ಅಷ್ಟು ಸುಲಭವಲ್ಲ. ಎಲ್ಲಿಯವರೆಗೆ ಬಿಜೆಪಿಯ ಆಡಳಿತದ ಪ್ರದರ್ಶನ ದುರ್ಬಲಗೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಅವರು ಗೆಲ್ಲುತ್ತಲೇ ಇರುತ್ತಾರೆ ಮತ್ತು ವಿರೋಧ ಪಕ್ಷಗಳು ಸೋಲುತ್ತಲೇ ಇರುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಗೆ ಕಾಯುತ್ತಿದೆ 'ಹೆಚ್ಚಿದ ನಿರೀಕ್ಷೆಗಳ' ಅಗ್ನಿಪರೀಕ್ಷೆ!
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಲೇ, ಪ್ರದೀಪ್ ಗುಪ್ತಾ ಆಡಳಿತ ಪಕ್ಷಕ್ಕೆ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ರಾಜಕೀಯದಲ್ಲಿ ಜನಾದೇಶ ದೊಡ್ಡದಾದಷ್ಟೂ, ಸಾರ್ವಜನಿಕರ ನಿರೀಕ್ಷೆಗಳ ಭಾರವೂ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ.
ಬೃಹತ್ ಜನಾದೇಶ ಸಿಕ್ಕಿದ ನಂತರ, ಸಹಜವಾಗಿಯೇ ಸಾರ್ವಜನಿಕರಿಗೆ ಬಿಜೆಪಿಯ ಮೇಲಿರುವ ನಿರೀಕ್ಷೆಗಳು ಗಗನಕ್ಕೇರಿವೆ. ಆದ್ದರಿಂದ, ಬಿಜೆಪಿ ಮತ್ತು ಎನ್‌ಡಿಎ ಈಗ ಕೇವಲ ಆಡಳಿತ ನಡೆಸಿದರೆ ಸಾಲದು, ಸೂಪರ್ ಪರ್ಫಾರ್ಮೆನ್ಸ್ ನೀಡಬೇಕಾದ ಅನಿವಾರ್ಯತೆ ಇದೆ. ಯಶಸ್ಸಿನ ಉತ್ತುಂಗಕ್ಕೇರಿದಾಗ ಅಲ್ಲಿಂದ ಕೆಳಗೆ ಬೀಳುವ ಸಾಧ್ಯತೆಗಳೂ ಹೆಚ್ಚಿರುತ್ತವೆ. ಬಿಜೆಪಿ ಈಗ ಅಂತಹ ಸವಾಲಿನ ಹಂತವನ್ನು ತಲುಪಿದೆ ಎಂದು ಪ್ರದೀಪ್ ಗುಪ್ತಾ ತಿಳಿಸಿದ್ದಾರೆ.
ಇನ್ನೂ 15 ವರ್ಷ ಅಧಿಕಾರದಿಂದ ದೂರವೇ ಉಳಿಯುತ್ತಾ ಕಾಂಗ್ರೆಸ್..?
ವಿರೋಧ ಪಕ್ಷವಾದ ಕಾಂಗ್ರೆಸ್‌ನ ಪ್ರಸ್ತುತ ರಾಜಕೀಯ ಹೋರಾಟ ಮತ್ತು ಹಿನ್ನಡೆಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಗುಪ್ತಾ, ಕಾಂಗ್ರೆಸ್ ಪಕ್ಷವು ಇನ್ನೂ ತನ್ನ ಹಳೆಯ ದುರಾಡಳಿತದ ಕಳಂಕ ಮತ್ತು ಸಾರ್ವಜನಿಕ ನಕಾರಾತ್ಮಕ ಭಾವನೆಗಳಿಂದ ಹೊರಬರಲು ಒದ್ದಾಡುತ್ತಿದೆ ಎಂದಿದ್ದಾರೆ.
ಜನಸಾಮಾನ್ಯರಲ್ಲಿ ಕಳೆದುಹೋಗಿರುವ ವಿಶ್ವಾಸವನ್ನು ಮರಳಿ ಗಳಿಸಲು ಕಾಂಗ್ರೆಸ್‌ಗೆ ಇನ್ನು ಹಲವು ವರ್ಷಗಳೇ ಬೇಕಾಗಬಹುದು. ಒಂದು ವೇಳೆ ನಾವು ಮುಂದಿನ 2029 ರ ಸಾರ್ವತ್ರಿಕ ಚುನಾವಣೆಯ ಬಗ್ಗೆ ಮಾತನಾಡಿದರೂ, ಅಷ್ಟರೊಳಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು 15 ವರ್ಷಗಳಾಗಿರುತ್ತವೆ. ಇಡೀ ದೇಶದ ಜನರನ್ನು ತನ್ನತ್ತ ಸೆಳೆದು, ಒಪ್ಪಿಸಲು ಕಾಂಗ್ರೆಸ್‌ಗೆ ಕನಿಷ್ಠ ಇನ್ನೂ 5 ವರ್ಷಗಳ ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಹಿಂದುತ್ವ ಮಾತ್ರ ಗೆಲುವಿನ ಸೂತ್ರವಲ್ಲ!
ಬಿಜೆಪಿಯ ಸತತ ಚುನಾವಣಾ ಯಶಸ್ಸು ಕೇವಲ ಧಾರ್ಮಿಕ ಧ್ರುವೀಕರಣ ಅಥವಾ ಹಿಂದೂ ಮತಗಳ ಕ್ರೋಡೀಕರಣದಿಂದಲೇ ಆಗುತ್ತಿದೆ ಎಂಬ ವಾದವನ್ನು ಪ್ರದೀಪ್ ಗುಪ್ತಾ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಯಾವುದೇ ಒಂದು ಚುನಾವಣೆಯ ಜಯ- ಅಪಜಯಗಳನ್ನು ಕೇವಲ ಹಿಂದೂ-ಮುಸ್ಲಿಂ ವಿಚಾರಗಳೇ ನಿರ್ಧರಿಸುವುದಿಲ್ಲ. ನೀವು ಬಿಜೆಪಿಯ ಗೆಲುವನ್ನು ಕೇವಲ ಧರ್ಮದ ಆಧಾರದ ಮೇಲೆ ನೋಡಿದರೆ, ಆಯಾ ರಾಜ್ಯಗಳಲ್ಲಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮತ್ತು ಉತ್ತಮ ಆಡಳಿತವನ್ನು ಅವಮಾನಿಸಿದಂತೆ ಆಗುತ್ತದೆ ಎಂದು ಖಡಕ್ಕ್ಕಾಗಿ ನುಡಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಚುನಾವಣಾ ಚಾಣಕ್ಯತನ ಹಾಗೂ ಆರ್‌ಎಸ್‌ಎಸ್ ಸಂಸ್ಥೆಯ ತಳಮಟ್ಟದ ಬಲವಾದ ನೆಟ್‌ವರ್ಕ್ ಜಂಟಿಯಾಗಿ ಬಿಜೆಪಿಯನ್ನು ದೇಶದ ಅತಿ ದೊಡ್ಡ ರಾಜಕೀಯ ಶಕ್ತಿಯನ್ನಾಗಿ ಕವಚದಂತೆ ರಕ್ಷಿಸುತ್ತಿದೆ ಎಂದು ಗುಪ್ತಾ ತಮ್ಮ ವಿಶ್ಲೇಷಣೆಯನ್ನು ಕೊನೆಗೊಳಿಸಿದ್ದಾರೆ.

