ಚಂಡೀಗಢ: ಪಂಜಾಬ್‌ನಾದ್ಯಂತ ತಲೆದೋರಿರುವ ಪೆಟ್ರೋಲ್ ಮತ್ತು ಡೀಸೆಲ್‌ನ ತೀವ್ರ ಕೊರತೆಯನ್ನು ಬಗೆಹರಿಸಲು ತಕ್ಷಣವೇ ಸರಕಾರ ಹಸ್ತಕ್ಷೇಪ ಮಾಡಬೇಕು ಎಂದು ರಾಜ್ಯದ ಪೆಟ್ರೋಲ್ ಬಂಕ್‌ಗಳು ಒತ್ತಾಯಿಸಿವೆ.
ರಾಜ್ಯದಾದ್ಯಂತ ಸುಮಾರು 3,700 ಪೆಟ್ರೋಲ್ ಬಂಕ್‌ಗಳಿದ್ದು, ಅವುಗಳಲ್ಲಿ ಶೇ.25 ರಷ್ಟು ಬಂಕ್‌ಗಳು ಗ್ರಾಮೀಣ ಕೃಷಿ ಪ್ರದೇಶಗಳಲ್ಲಿವೆ. ಇಲ್ಲಿ ಗೋಧಿ ಕೊಯ್ಲು ಮತ್ತು ಭತ್ತ ಬಿತ್ತನೆ ಹಂಗಾಮಿನಲ್ಲಿ ಇಂಧನದ ಬೇಡಿಕೆ ಹೆಚ್ಚಾಗಿರುತ್ತದೆ.
ಪಂಜಾಬ್ ಪೆಟ್ರೋಲ್ ಪಂಪ್ ಮಾರಾಟಗಾರರ ಸಂಘವು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕಳುಹಿಸಿರುವ ಇಮೇಲ್‌ನಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ತೈಲ ಮಾರುಕಟ್ಟೆ ಕಂಪೆನಿಗಳು ಮಾಡಿರುವ ತೀವ್ರ ಕಡಿತದತ್ತ ಬೆಟ್ಟು ಮಾಡಿವೆ.
ಇದರಿಂದಾಗಿ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ (ಪೆಟ್ರೋಲ್ ಬಂಕ್) ಇಂಧನ ತಕ್ಷಣವೇ ಸಂಪೂರ್ಣವಾಗಿ ಖಾಲಿಯಾಗುತ್ತಿದ್ದು, ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘ ಹೇಳಿದೆ.
ಐಒಸಿಎಲ್‌ನಿಂದ ಬರುವ ಪೂರೈಕೆ ತುಲನಾತ್ಮಕವಾಗಿ ಉತ್ತಮವಾಗಿದೆ, ಆದರೆ ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ನಿಂದ ಬರುವ ಪೂರೈಕೆ ಗಣನೀಯವಾಗಿ ಕುಸಿದಿದೆ ಎಂದು ಸಂಗದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಪತ್ರದಲ್ಲಿ ಬರೆದಿದ್ದಾರೆ.
ಪೆಟ್ರೋಲ್ ಬಂಕ್‌ಗಳು ಖಾಲಿಯಾಗುತ್ತಿವೆ ಮತ್ತು ಸರತಿ ಸಾಲುಗಳುಗಳು ಬೆಳೆಯುತ್ತಿವೆ ಎಂದು ಹೇಳಿರುವ ಅವರು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಮತ್ತು ಜನಾಕ್ರೋಶ ಹೆಚ್ಚುತ್ತಿದೆ ಎಂದಿದ್ದಾರೆ.

