ಕೋಲ್ಕತ: ತೃಣಮೂಲ ಕಾಂಗ್ರೆಸ್ ಸಂಸದೆ ಸಯೋನಿ ಘೋಷ್‌ರ ತಲೆ ಕಡಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿಕೆ ನೀಡಿದ್ದ ಉತ್ತರಪ್ರದೇಶದ ಸಿಕಂದರಾಬಾದ್ ನಗರ ಪಾಲಿಕೆ ಅಧ್ಯಕ್ಷ ಡಾ. ಪ್ರದೀಪ್ ದೀಕ್ಷಿತ್ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ತನಗೆ ಹಿಂಸೆಯಲ್ಲಿ ನಂಬಿಕೆಯಿಲ್ಲ ಎಂದು ಈಗ ಅವರು ಹೇಳಿದ್ದಾರೆ. ತಾನು ಸಾಮಾಜಿಕ ಮಾಧ್ಯಮ ಸಂದೇಶವೊಂದನ್ನು ನೋಡಿದ್ದು, ಅದರಲ್ಲಿ ಶಿವನಿಗೆ ಅವಮಾನ ಮಾಡಲಾಗಿದೆ ಎಂಬುದಾಗಿ ತಾನು ಭಾವಿಸಿದೆ. ಆಗ ಆಕ್ರೋಶದಿಂದ ಆ ರೀತಿ ಹೇಳಿಕೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ಮಂಗಳವಾರ 'ಎಕ್ಸ್'ನಲ್ಲಿ ಸಂದೇಶವೊಂದರಲ್ಲಿ, ಸಯೋನಿ ಘೋಷ್, ಉತ್ತರಪ್ರದೇಶದ ಸಿಕಂದರಾಬಾದ್‌ನ ನಗರ ಪಾಲಿಕೆ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ನನ್ನ ಶಿರಚ್ಛೇದಕ್ಕಾಗಿ ಒಂದು ಕೋಟಿ ರೂ. ಬಹುಮಾನ ಘೋಷಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದನ್ನು ಕಂಡು ಆಘಾತವಾಗಿದೆ ಎಂದು ಹೇಳಿದ್ದರು.
''ಈ ಬೆದರಿಕೆಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ವರದಿಯಾಗಿದೆ. ಗೌರವಾನ್ವಿತ ನರೇಂದ್ರ ಮೋದಿ, ಅಮಿತ್ ಶಾ, ನಿತಿನ್ ನಬಿನ್ ಮತ್ತು ಓಂ ಬಿರ್ಲಾ ಅವರಿಗೆ ನನ್ನದೊಂದು ಪ್ರಶ್ನೆ: ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ, ಬಿಜೆಪಿಯ ಜನ ಪ್ರತಿನಿಧಿಯೊಬ್ಬರು, ಹಾಲಿ ಮಹಿಳಾ ಸಂಸದೆಯ ಶಿರಚ್ಛೇದಕ್ಕೆ ಬಹುಮಾನ ಘೋಷಿಸುವುದು ನವ ಭಾರತದ 'ನಾರಿ ಶಕ್ತಿ ವಂದನೆ'ಯ ನೈಜ ಕಲ್ಪನೆಯೇ?'' ಎಂದು ತನ್ನ ಸಂದೇಶದಲ್ಲಿ ಸಯೋನಿ ಪ್ರಶ್ನಿಸಿದ್ದರು.

