ಈ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು ಮತ್ತು ಅದರ ದಿನಾಂಕ ಹೊಸದಾಗಿ ಪ್ರಕಟಿಸಲಾಗುವುದು ಎಂದು ಎನ್‌ಟಿಎ ಹೇಳಿದೆ.
22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ:
ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಮೇ 3ರಂದು ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್-ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಕಾರಣದಿಂದ ಎನ್‌ಟಿಎ ಆ ಪರೀಕ್ಷೆಯನ್ನು ಮಂಗಳವಾರ (ಮೇ 12) ರದ್ದುಗೊಳಿಸಿದೆ. ಈ ಕ್ರಮವು ಪರೀಕ್ಷೆಗೆ ಹಾಜರಾದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
15 ಜನರ ವಿಚಾರಣೆ
ಈ ಪ್ರಕರಣದ ಕುರಿತು ಈಗಾಗಲೇ ತನಿಖೆ ನಡೆಸುತ್ತಿರುವ ರಾಜಸ್ಥಾನದ ವಿಶೇಷ ಕಾರ್ಯಪಡೆಯು (ಎಸ್‌ಒಜಿ) ರಾಜಸ್ಥಾನದ ಸಿಕರ್, ಜುನ್‌ಜುನು ಮತ್ತು ಉತ್ತರಾಖಂಡದ ಡೆಹರಾಡೂನ್ ಹಾಗೂ ಕೇರಳಂನ ವ್ಯಕ್ತಿಗಳು ಸೇರಿದಂತೆ 15 ಜನರ ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ರಾಜಸ್ಥಾನದ ಪೊಲೀಸರ ಮನವಿ ಮೇರೆಗೆ ಮಹಾರಾಷ್ಟ್ರದ ಪೊಲೀಸರು ನಾಸಿಕ್‌ನಲ್ಲಿ ಮಂಗಳವಾರ ಶುಭಂ ಖೈರ್‌ನಾರ್ (30)ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಆತನನ್ನು ಸಿಬಿಐ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.
ಈಗಲೂ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ದುರದೃಷ್ಟಕರ. ಇದರಿಂದ ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
ಇದೇ ಮೊದಲಲ್ಲ:
ನೀಟ್-ಯುಜಿ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಎನ್‌ಟಿಎ, ವಿವಾದಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. 2024ರಲ್ಲಿ, ಪಾಟ್ನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ನಡೆದಿದ್ದು. ಇದರಿಂದ ಎನ್‌ಟಿಎ 1563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಿತು. ಅಲ್ಲದೇ 2020ರ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಹಲವು ದೋಷಗಳಿದ್ದ ಕಾರಣ ಎನ್‌ಟಿಎ ಟೀಕೆಗೆ ಗುರಿಯಾಗಿತ್ತು.

